ನವದೆಹಲಿ: ಭಾರತ ಸರ್ಕಾರವು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಹಸಿರು ಯೋಜನೆಗಳನ್ನು ಪ್ರೋತ್ಸಾಹಿಸಲು ಭಾರತೀಯ ಕಾರ್ಬನ್ ಮಾರುಕಟ್ಟೆ (ICM) ಯ ಅಡಿಯಲ್ಲಿ ಹೊಸ ನಿಯಮಗಳನ್ನು ಅನುಮೋದಿಸಿದೆ. ಈ ಕ್ರಮವು ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಮಾಲಿನ್ಯ ಕಡಿತಗೊಳಿಸಲು ಪ್ರೇರೇಪಿಸಲಿದೆ ಹಾಗೂ ಕಾರ್ಬನ್ ಕ್ರೆಡಿಟ್ ಗಳಿಸಿಕೊಳ್ಳಲು ಸಹಾಯ ಮಾಡಲಿದೆ.


ಕಾರ್ಬನ್ ಕ್ರೆಡಿಟ್ ವ್ಯಾಪಾರ ಯೋಜನೆ ಎಂದರೇನು?
2023 ರಲ್ಲಿ ಪರಿಚಯಿಸಲಾದ ಕಾರ್ಬನ್ ಕ್ರೆಡಿಟ್ ವ್ಯಾಪಾರ ಯೋಜನೆ (Carbon Credit Trading Scheme, 2023) ಭಾರತೀಯ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಪರಿಸರಕ್ಕೆ ಕಾರ್ಬನ್ ಬಿಡುಗಡೆ ಮಾಡುವುದನ್ನು ಕಡಿಮೆ ಮಾಡುವುದು ಮತ್ತು ಆ ಕುಶಲತೆಯನ್ನು ಕ್ರೆಡಿಟ್ ರೂಪದಲ್ಲಿ ವ್ಯಾಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. 2023 ಡಿಸೆಂಬರ್‌ನಲ್ಲಿ, ಸರ್ಕಾರವು ಆಫ್ಸೆಟ್ ಮೆಕಾನಿಸಂ ಅನ್ನು ಪರಿಚಯಿಸಿತು, ಇದರಿಂದ ಕಡ್ಡಾಯ ವಿಸರ್ಜನೆ ನಿಯಂತ್ರಣದ ವ್ಯಾಪ್ತಿಗೆ ಬರದ ಕಂಪನಿಗಳು ಸಹ ಹಸಿರು ಯೋಜನೆಗಳಲ್ಲಿ ಪಾಲ್ಗೊಳ್ಳಬಹುದು.
ಹೊಸ ನಿಯಮಗಳಲ್ಲೇನಿದೆ?
ಭಾರತ ಸರ್ಕಾರವು ಆಫ್ಸೆಟ್ ಮೆಕಾನಿಸಂನ ವಿವರವಾದ ಕಾರ್ಯವಿಧಾನವನ್ನು ಅನುಮೋದಿಸಿದ್ದು, ಎಂಟು ಹೊಸ ವಿಧಾನಗಳ ಮೂಲಕ ಕಾರ್ಬನ್ ವಿಸರ್ಜನೆಯನ್ನು ಕಡಿಮೆ ಮಾಡಲು ಅನುಕೂಲ ಕಲ್ಪಿಸಿದೆ. ಇದು ಕೈಗಾರಿಕೆಗಳು, ಉದ್ಯಮಗಳು ಮತ್ತು ವಿವಿಧ ಸಂಸ್ಥೆಗಳು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಕಾರ್ಬನ್ ಕ್ರೆಡಿಟ್ ಗಳಿಸಲು ಸಹಾಯ ಮಾಡಲಿದೆ.
ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕೆ ಎಂಟು ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದೆ:
1. ನವೀಕರಿಸಬಹುದಾದ ಇಂಧನ (ಹೈಡ್ರೋ ಮತ್ತು ಪಂಪ್ಡ್ ಸ್ಟೋರೇಜ್ ಸಹಿತ) ಬಳಕೆ
ಇದರಿಂದ ಸೌರ, ವಾಯು, ಹೈಡ್ರೋ ಮತ್ತು ಪಂಪ್ಡ್ ಸ್ಟೋರೇಜ್ ವ್ಯವಸ್ಥೆಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ಸಿಗುತ್ತದೆ. ಕಲ್ಲಿದ್ದಲು ಮತ್ತು ಇತರ ಪಳೆಯುಳಿಕೆ ಇಂಧನಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
2. ಹಸಿರು ಹೈಡ್ರೋಜನ್ ಉತ್ಪಾದನೆ
ಪಳೆಯುಳಿಕೆ ಇಂಧನದ ಬದಲಾಗಿ ನವೀಕರಿಸಬಹುದಾದ ಇಂಧನದಿಂದ ಹೈಡ್ರೋಜನ್ ಉತ್ಪಾದನೆಯನ್ನು ಬೆಂಬಲಿಸಲಾಗುತ್ತದೆ. ಉಕ್ಕು, ಸಾರಿಗೆ ಮತ್ತು ರಸಗೊಬ್ಬರ ಉದ್ಯಮಗಳಲ್ಲಿ ಹಸಿರು ಹೈಡ್ರೋಜನ್ ಬಳಸುವುದರಿಂದ ಕಾರ್ಬನ್ ಉತ್ಪತ್ತಿ ಕಡಿಮೆಯಾಗುತ್ತದೆ.
3. ಕೈಗಾರಿಕಾ ಇಂಧನ ಕಾರ್ಯಕ್ಷಮತೆ
ಕೈಗಾರಿಕೆಗಳಲ್ಲಿ ಉನ್ನತ ತಂತ್ರಜ್ಞಾನಗಳನ್ನು ಅಳವಡಿಸುವಂತೆ ಒತ್ತಾಯಿಸುತ್ತದೆ, ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ. ಉದಾಹರಣೆಗಳು: ಆಧುನಿಕ ಯಂತ್ರೋಪಕರಣಗಳು, ಉಷ್ಣತೆಯ ಪುನರ್ಬಳಕೆ, ಉತ್ಪಾದನಾ ಪ್ರಕ್ರಿಯೆಗಳ ಸುಧಾರಣೆ.
4. ಪೋಲಾಗುತ್ತಿರುವ ಉಷ್ಣತೆಯ ಮರುಬಳಕೆ
ಕೈಗಾರಿಕೆಗಳಲ್ಲಿ ಬಳಸದೇ ಪೋಲಾಗುತ್ತಿರುವ ತಾಪವನ್ನು ಸಂಗ್ರಹಿಸಿ ಮರುಬಳಕೆ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಉಕ್ಕು, ಸಿಮೆಂಟ್ ಮತ್ತು ರಾಸಾಯನಿಕ ಕ್ಷೇತ್ರಗಳಲ್ಲಿ ಇಂಧನ ಬಳಕೆಯನ್ನು ಕಡಿಮೆಯಾಗಿಸುತ್ತದೆ.
5. ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಮೀಥೇನ್ ಮರುಬಳಕೆ
ತಿಪ್ಪೆ ರಾಶಿಗಳಿಂದ ಹೊರಬರುವ ಮೀಥೇನ್ ಅನಿಲವನ್ನು ಸಂಗ್ರಹಿಸಿ ಉಪಯೋಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮೀಥೇನ್ ಅತ್ಯಂತ ಹಾನಿಕಾರಕ ಹಸಿರುಮನೆ ಅನಿಲ. ಇದನ್ನು ನಿಯಂತ್ರಿಸುವುದು ಪರಿಸರಕ್ಕೆ ಸಹಾಯಕ.
6. ಮ್ಯಾಂಗ್ರೋವ್ ಅರಣ್ಯಗಳ ನಿರ್ಮಾಣ:
ಸಮುದ್ರ ತೀರ ಪ್ರದೇಶಗಳಲ್ಲಿ ಮ್ಯಾಂಗ್ರೋವ್ ಮರಗಳನ್ನು ನೆಡುವ ಮತ್ತು ಪುನಶ್ಚೇತನಗೊಳಿಸುವ ಯೋಜನೆ. ಮ್ಯಾಂಗ್ರೋವ್ ಹೆಚ್ಚು ಪ್ರಮಾಣದಲ್ಲಿ CO₂ ಅನ್ನು ಹೀರಿಕೊಂಡು ಹವಾಮಾನ ಬದಲಾವಣೆ ವಿರುದ್ಧ ಪ್ರಾಕೃತಿಕ ರಕ್ಷಣೆಯನ್ನು ಒದಗಿಸುತ್ತದೆ.
7. ಸುಸ್ಥಿರ ಕೃಷಿ ಮತ್ತು ಮಣ್ಣಿನಲ್ಲಿರುವ ಇಂಗಾಲದ ಅಂಶದ ನಿರ್ಮೂಲನೆ
ಮಣ್ಣಿನಲ್ಲಿರುವ ಇಂಗಾಲದ ನಿರ್ಮೂಲನೆ ಮಾಡುವುದಕ್ಕೆ ಪರಿಸರ ಸ್ನೇಹಿ ಕೃಷಿಯನ್ನು ಬೆಂಬಲಿಸುವ ಕ್ರಮಗಳನ್ನು ಅನುಸರಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಸಾವಯವ ಕೃಷಿ, ಬಯೋಚಾರ್ ಬಳಕೆ ಮತ್ತು ಸುಧಾರಿತ ನೀರಾವರಿ ವ್ಯವಸ್ಥೆಗಳ ಮೂಲಕ ಸುಸ್ಥಿರ ಕೃಷಿಯನ್ನು ಸಾಧಿಸಬಹುದು.
8. ಕಟ್ಟಡಗಳ ಇಂಧನ ಕಾರ್ಯಕ್ಷಮತೆ
ಮನೆ, ಕಚೇರಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಶಕ್ತಿಯ ಸಮರ್ಥ ಬಳಕೆಯನ್ನು ಉತ್ತೇಜಿಸಲಾಗುವುದು. ಎಲ್ಇಡಿ ಬಲ್ಬ್‌ಗಳು, ಸೌರ ನೀರಿನ ತಾಪಕಗಳು, ಸ್ಮಾರ್ಟ್ ಎನರ್ಜಿ ವ್ಯವಸ್ಥೆಗಳು, ಮತ್ತು ಉತ್ತಮ ಉಷ್ಣ ನಿಯಂತ್ರಣ ವ್ಯವಸ್ಥೆಗಳನ್ನು ಬಳಸುವುದರ ಮೂಲಕ ಕಡಿಮೆ ಪ್ರಮಾಣದ ಶಕ್ತಿಯನ್ನು ಬಳಸಬಹುದು.
ಈ ಕ್ರಮದಿಂದ ಏನು ಪ್ರಯೋಜನ?
ಆಫ್ಸೆಟ್ ಮೆಕಾನಿಸಂ ಕಂಪನಿಗಳಿಗೆ ಹಸಿರು ಯೋಜನೆಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ, ಹಾಗೆಯೇ ಮಾಲಿನ್ಯ ಕಡಿಮೆ ಮಾಡಿದರೆ, ಕಾರ್ಬನ್ ಕ್ರೆಡಿಟ್ ಗಳಿಸಿ ವ್ಯಾಪಾರ ಮಾಡಬಹುದು. ಇದು ಗ್ರೀನ್ ಎನರ್ಜಿ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಹೂಡಿಕೆಯನ್ನು ಹೆಚ್ಚಿಸುತ್ತದೆ.
ಈ ಯೋಜನೆಗಳು ಪರಿಸರ ಸ್ನೇಹಿ ಯೋಜನೆಗಳಿಗೆ ಬಲವನ್ನು ನೀಡುವುದರ ಜೊತೆಗೆ, ಉದ್ಯಮಗಳಿಗೆ ಹಸಿರು ತಂತ್ರಜ್ಞಾನಗಳತ್ತ ಗಮನ ಹರಿಸಲು ಸಹಾಯ ಮಾಡಲಿವೆ. ಭಾರತವು ತನ್ನ ವಾತಾವತಣದಲ್ಲಿನ ಇಂಗಾಲದ ಡೈ ಆಕ್ಸೈಡ್ ತೀವ್ರತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಈ ಹೊಸ ನಿಯಮಗಳು ಅದನ್ನು ಸಾಧಿಸುವಲ್ಲಿ ಸಹಾಯ ಮಾಡಲಿವೆ. ಹಸಿರು ತಂತ್ರಜ್ಞಾನಗಳಲ್ಲಿ ಹೂಡಿಕೆ ಹೆಚ್ಚಾಗಿ, ಪರಿಸರದ ಸಂರಕ್ಷಣೆಗೆ ಉತ್ತೇಜನ ದೊರೆಯಲಿದೆ. ಇದರಿಂದ ಹೆಚ್ಚು ಕಂಪನಿಗಳು ಕಾರ್ಬನ್ ಕ್ರೆಡಿಟ್ ಮಾರುಕಟ್ಟೆಗೆ ಸೇರುವ ಅವಕಾಶ ಲಭಿಸುವುದರ ಜೊತೆಗೆ ದೇಶದ ಪರಿಸರ ರಕ್ಷಣಾ ಪ್ರಯತ್ನಗಳು ಮತ್ತಷ್ಟು ಬಲ ಪಡಲಿವೆ.