
ಹುಟ್ಟುತ್ತಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ತಂತ್ರಜ್ಞಾನವೊಂದು ಹೊಸ ಪರಿಹಾರವನ್ನು ಒದಗಿಸಿದೆ. ಅಕ್ಕಿ ಕಾಳಿಗಿಂತಲೂ ಚಿಕ್ಕ ಹೊಸ ಪೇಸ್-ಮೇಕರ್ ಅತ್ಯಂತ ಸೂಕ್ಷ್ಮ ಹೃದ್ರೋಗಿಗಳಿಗೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ ಜೀವ ರಕ್ಷಿಸುವ ಪರಿಹಾರಗಳನ್ನು ನೀಡುತ್ತಿದೆ.


ಈ ಹೊಸ ಪೇಸ್ಮೇಕರ್ ಅನ್ನು ಮಕ್ಕಳ ಅತಿ ಸೂಕ್ಷ್ಮ ಹೃದಯಗಳ ಅಗತ್ಯಗಳನ್ನು ಪರಿಹರಿಸುವುದಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಶಿಶುಗಳ ಹೃದಯದ ಗುಣಾತ್ಮಕತೆಯನ್ನು ಕಾಯ್ದುಕೊಳ್ಳುವ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಈ ಪೇಸ್ಮೇಕರ್ ಅನ್ನು ಎದೆಯ ಮೇಲೆ ಧರಿಸಲು ಸೂಕ್ತವಾದ, ಮೆತ್ತನೆಯ, ನಮ್ಯ ಪ್ಯಾಚ್‌ನೊಂದಿಗೆ ಜೋಡಿಸಲಾಗಿದೆ. ಈ ಪ್ಯಾಚ್ ಹೃದಯವನ್ನು ಪರಿಶೀಲಿಸುತ್ತಿರುತ್ತದೆ. ಹೃದಯದ ಲಯಬದ್ಧ ಕಾರ್ಯದಲ್ಲೇನಾದರೂ ಏರುಪೇರುಗಳು ಕಂಡುಬಂದರೆ, ಅದು ಕಿರಿದಾದ ಬೆಳಕಿನ ಕಿರಣಗಳನ್ನು ಬಿಡುಗಡೆ ಮಾಡಿ, ಹೃದಯದ ಕಾರ್ಯಗಳನ್ನು ಸರಿಪಡಿಸುತ್ತದೆ.
ಈ ಫೇಸ್ ಮೇಕರ್ ಹಳೆಯ ಪೇಸ್ ಮೇಕರ್‌ನಂತೆಯೇ ವಿದ್ಯುತ್ ಪ್ರಚೋದನೆಗಳನ್ನು ಹೃದಯಕ್ಕೆ ಕಳುಹಿಸುತ್ತದೆ. ಆದರೆ, ಹಳೆಯ ಫೇಸ್ ಮೇಕರ್‌ಗೆ ಹೋಲಿಸಿದರೆ, ಹೊಸ ಫೇಸ್ ಮೇಕರ್ ಯಾವುದೇ ಎಲೆಕ್ಟ್ರೋಡ್‌ಗಳನ್ನು ಅಥವಾ ತಂತಿಗಳನ್ನು ಬಳಸದೇ ಸೂಕ್ತ ಸಮಯಕ್ಕೆ ಲಯಬದ್ಧತೆಯನ್ನು ನೀಡುತ್ತದೆ. ಇದು ಮೆತ್ತನೆ ಬಾಗುವಂತೆ ಇರುವುದರಿಂದ, ಮಕ್ಕಳು ಮುಕ್ತವಾಗಿ ಓಡಾಡುತ್ತಿರುವಾಗಲೇ, ಹೃದಯಕ್ಕೆ ಅಗತ್ಯ ನಿಯಂತ್ರಣವೂ ದೊರೆಯುತ್ತದೆ.
ಈ ಸಾಧನದ ಇನ್ನೊಂದು ಅದ್ಭುತ ವೈಶಿಷ್ಟ್ಯವೆಂದರೆ ಇದು ದೇಹದಲ್ಲಿಯೇ ಕರಗಿ ಹೋಗುತ್ತದೆ. ಪೇಸ್ಮೇಕರ್ ತನ್ನ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿದ ಬಳಿಕ, ಶಿಶುಗಳ ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಖಾತ್ರಿಯಾದಾಗ, ಸಾಧನವು ದೇಹದೊಳಗೆ ಕರಗಿಹೋಗುತ್ತದೆ. ಇದರಿಂದ ಇದನ್ನು ದೇಹದಿಂದ ಹೊರತೆಗೆಯುವುದಕ್ಕೆ ಯಾವುದೇ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿರುವುದಿಲ್ಲ. ಪರಿಣಾಮವಾಗಿ ಜಟಿಲತೆ ಕಡಿಮೆಯಾಗುತ್ತದೆ. ಇದರಿಂದ ರೋಗಿಗಳಿಗೆ ಯಾವುದೇ ನೋವನ್ನು ಅನುಭವಿಸುವ ಅಗತ್ಯವಿರುವುದಿಲ್ಲ. ಜೊತೆಗೆ ಪೋಷಕರು ಮತ್ತು ವೈದ್ಯರು ನಿರಾಳರಾಗಿರಬಹುದು.
ಅತಿ ಸೂಕ್ಷ್ಮ ಹೃದಯಗಳಿಗೆ ಜೀವ ರಕ್ಷಣೆ
100 ಮಕ್ಕಳಲ್ಲಿ 1 ಮಗು ಹುಟ್ಟುತ್ತಲೇ ಹೃದ್ರೋಗದಿಂದ ಬಳಲುತ್ತಿದೆ. ಈ ಮಕ್ಕಳಲ್ಲಿ ಹಲವಾರು ಮಕ್ಕಳು ಪ್ರಾರಂಭಿಕ ದಿನಗಳಲ್ಲಿ ಅಥವಾ ತಿಂಗಳಗಳಲ್ಲಿ ವಿಶೇಷ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಹೃದಯದ ಸೂಕ್ಷ್ಮತೆ ಮತ್ತು ಹಳೆಯ ಪೇಸ್ಮೇಕರ್ ತಂತ್ರಜ್ಞಾನದಿಂದಾಗುವ ಅಪಾಯಗಳಿಂದ ಇಂತಹ ಮಕ್ಕಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಕಷ್ಟಕರವಾಗಿತ್ತು. ಹಳೆಯ ಫೇಸ್ ಮೇಕರ್‌ಗಳ ಗಾತ್ರವು ದೊಡ್ಡದಾಗಿದ್ದು ಹೃದಯಕ್ಕೆ ಜೋಡಿಸಲು ಜಟಿಲ ಶಸ್ತ್ರ ಚಿಕಿತ್ಸೆಗಳನ್ನು ಮಾಡಬೇಕಿತ್ತು. ಬಳಿಕ ದೇಹದಿಂದ ಹೊರತೆಗೆಯುವುದಕ್ಕೂ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಿತ್ತು. ಎಳೆಯ ಜೀವಗಳಿಗೆ ಇಂತಹ ಶಸ್ತ್ರ ಚಿಕಿತ್ಸೆಗಳನ್ನು ಮಾಡುವುದು ಮತ್ತು ಅದರ ಬಳಿಕ ಆರೈಕೆ ಮಾಡುವುದು ಅತ್ಯಂತ ಕಷ್ಟವಾಗಿತ್ತು.
ಆದರೆ, ಈ ಹೊಸ ಫೇಸ್ ಮೇಕರ್‌ನೊಂದಿಗೆ, ವೈದ್ಯರು ಈಗ ಹೆಚ್ಚು ಮೃದುವಾದ ಪರ್ಯಾಯವನ್ನು ಒದಗಿಸಬಹುದು. ಮಕ್ಕಳ ಹೃದ್ರೋಗ ತಜ್ಞರಾದ ಡಾ. ಎಮಿಲಿ ಲಾರ್ಕ್ ಅವರು “ಈ ತಂತ್ರಜ್ಞಾನವು ಮಕ್ಕಳ ಆರೈಕೆ ಘಟಕಕ್ಕೆ ಒಂದು ಕ್ರಾಂತಿಕಾರಿ ಸಾಧನವಾಗಿದೆ. ಪೇಸ್ಮೇರ್ ನವಜಾತಗಳ ಸೂಕ್ಷ್ಮ ಹೃದಯಗಳಿಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತಿದ್ದು, ಅವುಗಳಿಗೆ ಸರಿಯಾದ ಪೇಸಿಂಗ್ ಅನ್ನು ನೀಡುತ್ತದೆ. ಜೊತೆಗೆ ರೋಗಿಯ ಅನುಕೂಲತೆಗೆ ಮತ್ತು ಸುರಕ್ಷತೆಗಾಗಿ ಇತರ ಯಾವುದೇ ಸಾಧನಗಳನ್ನು ಬಳಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಮಕ್ಕಳ ಹೃದಯದ ಆರೈಕೆ ಭವಿಷ್ಯ
ಈ ಹೊಸ ಪೇಸ್ಮೇಕರ್ ಮುಂದಿನ ದಿನಗಳಲ್ಲಿ, ಹೃದ್ರೋಗಿಗಳನ್ನು ಗುಣಪಡಿಸುವಲ್ಲಿ ಮಹತ್ತರ ಪಾತ್ರವಹಿಸಲಿದೆ. ಈ ಮೆತ್ತನೆಯ ಜೋಡಣೆ ಹೃದ್ರೋಗಿಗಳಿಗೆ ಉತ್ತಮ ಆರೋಗ್ಯವನ್ನು ಕಲ್ಪಿಸುವುದರ ಜೊತೆಗೆ, ವೈದ್ಯರಿಗೂ ಹೃದಯ ಸಂಬಂಧಿ ದತ್ತಾಂಶಗಳನ್ನು ನೀಡಲಿದೆ.