ಪಾಟ್ನಾ: ಬಿಹಾರ ರಾಜಕಾರಣದಲ್ಲಿ ಇಂದು ಹೊಸ ಇತಿಹಾಸ ನಿರ್ಮಾಣವಾಗಲಿದೆ. ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿ ಹಿರಿಯ ನಾಯಕ ಸಮ್ರಾಟ್ ಚೌಧರಿ ಅವರು ಇಂದು (ಏಪ್ರಿಲ್ 15) ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಪಾಟ್ನಾದ ಲೋಕ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅಟಾ ಹಸ್ನೇನ್ ಅವರು ಚೌಧರಿ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿರುವ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಸಮ್ರಾಟ್ ಚೌಧರಿ ಪಾತ್ರರಾಗಲಿದ್ದಾರೆ.
ರಾಜ್ಯಪಾಲರ ಭೇಟಿ – ಸರ್ಕಾರ ರಚನೆಗೆ ಹಕ್ಕು ಮಂಡನೆ
ನಿನ್ನೆ ಬೆಳಿಗ್ಗೆ ಸಮ್ರಾಟ್ ಚೌಧರಿ ಅವರು ಲೋಕ ಭವನದಲ್ಲಿ ರಾಜ್ಯಪಾಲ ಸೈಯದ್ ಅಟಾ ಹಸ್ನೇನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕನ್ನು ಮಂಡಿಸಿದರು. ಇದಕ್ಕೂ ಮುನ್ನ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಚೌಧರಿ ಅವರನ್ನು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.
ನಿತೀಶ್ ಕುಮಾರ್ ರಾಜೀನಾಮೆಯಿಂದ ಬದಲಾದ ಸಮೀಕರಣ
ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯವಾಗಿತ್ತು. ನಿತೀಶ್ ಕುಮಾರ್ ಅವರ ರಾಜೀನಾಮೆಯ ಬೆನ್ನಲ್ಲೇ ಬಿಜೆಪಿ ತನ್ನ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಯಶಸ್ವಿಯಾಗಿದೆ.
ನಾಯಕತ್ವ ಆಯ್ಕೆ ಪ್ರಕ್ರಿಯೆ
ಪಾಟ್ನಾದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮ್ರಾಟ್ ಚೌಧರಿ ಅವರ ಹೆಸರನ್ನು ಹಿರಿಯ ನಾಯಕ ವಿಜಯ್ ಕುಮಾರ್ ಸಿನ್ಹಾ ಪ್ರಸ್ತಾಪಿಸಿದರು. ಇದನ್ನು ದಿಲೀಪ್ ಜೈಸ್ವಾಲ್ ಅನುಮೋದಿಸಿದರು. ಕೇಂದ್ರ ವೀಕ್ಷಕ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕೃತವಾಗಿ ಚೌಧರಿ ಅವರ ಹೆಸರನ್ನು ಘೋಷಿಸಿದರು.
‘ಜನರ ನಂಬಿಕೆ ಉಳಿಸಿಕೊಳ್ಳುವೆ’ – ಸಮ್ರಾಟ್ ಚೌಧರಿ
ತಾರಾಪುರ ಕ್ಷೇತ್ರದ ಶಾಸಕರಾಗಿರುವ ಸಮ್ರಾಟ್ ಚೌಧರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಬಿಹಾರದ ಜನರ ಸೇವೆ ಮಾಡಲು ಇದೊಂದು ಸುವರ್ಣ ಅವಕಾಶ. ಜನರ ನಂಬಿಕೆ ಮತ್ತು ಕನಸುಗಳನ್ನು ನನಸು ಮಾಡಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ಭರವಸೆ ನೀಡಿದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 89 ಶಾಸಕರನ್ನು ಹೊಂದಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಯು ಬೆಂಬಲದೊಂದಿಗೆ ಈಗ ಬಿಜೆಪಿ ರಾಜ್ಯದಲ್ಲಿ ತನ್ನ ಮೊದಲ ಮುಖ್ಯಮಂತ್ರಿಯನ್ನು ಕಾಣುತ್ತಿದೆ.

