LPG Refill Booking: ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಕ್ಕೂ LPG ಸಿಲಿಂಡರ್ ಬುಕಿಂಗ್‌ಗೆ 25 ದಿನಗಳ ಏಕರೂಪ ನಿಯಮ ಜಾರಿ!

LPG Refill Booking: ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಕ್ಕೂ LPG ಸಿಲಿಂಡರ್ ಬುಕಿಂಗ್‌ಗೆ 25 ದಿನಗಳ ಏಕರೂಪ ನಿಯಮ ಜಾರಿ!

ನವದೆಹಲಿ: ದೇಶದ ಗೃಹಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಎಲ್‌ಪಿಜಿ ರಿಫಿಲ್ ಬುಕಿಂಗ್‌ಗೆ 25 ದಿನಗಳ ಏಕರೂಪದ ಕಾಲಾವಕಾಶದ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಪೆಟ್ರೋಲಿಯಂ ಸಚಿವಾಲಯ ನಿರ್ದೇಶನ ನೀಡಿದೆ.

​ಈ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ನಿಯಮ ಸಡಿಲಿಕೆಗೆ ಕಾರಣವೇನು?​ಮಧ್ಯಪ್ರಾಚ್ಯದಲ್ಲಿ ಎದುರಾಗಿದ್ದ ಯುದ್ಧದ ಪರಿಸ್ಥಿತಿ ಮತ್ತು ಪೂರೈಕೆಯಲ್ಲಾದ ವ್ಯತ್ಯಯದಿಂದಾಗಿ, ಅಡುಗೆ ಅನಿಲ ಪೂರೈಕೆಯಲ್ಲಿ ತೀವ್ರ ಒತ್ತಡ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಹಿಂದೆ ನಿಯಂತ್ರಣ ಕ್ರಮವಾಗಿ ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಕಾಲಾವಕಾಶದ ಮಧ್ಯಂತರವನ್ನು ನಿಗದಿಪಡಿಸಲಾಗಿತ್ತು.

ಆದರೆ, ಪ್ರಸ್ತುತ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಸ್ಥಿತಿಗತಿಯು ಸಂಪೂರ್ಣವಾಗಿ ಸುಧಾರಿಸಿದ್ದು, ಬ್ಯಾಕ್‌ಲಾಗ್ (ಪೆಂಡಿಂಗ್ ಆಡರ್) ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಗ್ರಾಹಕರಿಗೆ ವಿಧಿಸಲಾಗಿದ್ದ 45 ದಿನಗಳ ಕಾಯುವಿಕೆಯ ಕಟ್ಟುನಿಟ್ಟಿನ ನಿಯಮವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಕೋಟ್ಯಂತರ ಎಲ್‌ಪಿಜಿ ಬಳಕೆದಾರರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದ್ದು, ಸಿಲಿಂಡರ್ ಕೊರತೆಯ ಭೀತಿ ತಪ್ಪಲಿದೆ.

ರಾಷ್ಟ್ರೀಯ