ಸಕ್ಕರೆ ಕಾಳಸಂತೆಗೆ ಬ್ರೇಕ್: ವರ್ತಕರ ಸ್ಟಾಕ್ ಮಿತಿಯನ್ನು 2,000 ಕ್ವಿಂಟಾಲ್‌ಗೆ ಇಳಿಸಿದ ಕೇಂದ್ರ ಸರ್ಕಾರ

ಸಕ್ಕರೆ ಕಾಳಸಂತೆಗೆ ಬ್ರೇಕ್: ವರ್ತಕರ ಸ್ಟಾಕ್ ಮಿತಿಯನ್ನು 2,000 ಕ್ವಿಂಟಾಲ್‌ಗೆ ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಸಕ್ಕರೆ ವರ್ತಕರು ಮತ್ತು ರಫ್ತುದಾರರು ಇರಿಸಿಕೊಳ್ಳಬಹುದಾದ ಗರಿಷ್ಠ ಸ್ಟಾಕ್ (ದಾಸ್ತಾನು) ಮಿತಿಯನ್ನು 4,000 ಕ್ವಿಂಟಾಲ್‌ನಿಂದ 2,000 ಕ್ವಿಂಟಾಲ್‌ಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

ಈ ನೂತನ ನಿಯಮವು ಈ ತಿಂಗಳ 15 ರಂದೇ ಜಾರಿಗೆ ಬರಲಿದ್ದು, ನವೆಂಬರ್ 30 ರವರೆಗೆ ಜಾರಿಯಲ್ಲಿರಲಿದೆ ಎಂದು ನಗರಾಭಿವೃದ್ಧಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ನಗರಾಭಿವೃದ್ಧಿ ಹಾಗೂ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಾಳಸಂತೆ ಮತ್ತು ಕೃತಕ ಅಭಾವಕ್ಕೆ ತಡೆ: ​ಸಕ್ಕರೆಯನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವುದನ್ನು ತಡೆಯುವುದು ಹಾಗೂ ಊಹಾಪೋಹದ ವ್ಯಾಪಾರಕ್ಕೆ ಬ್ರೇಕ್ ಹಾಕುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಯುವುದು ಮತ್ತು ಮಾರುಕಟ್ಟೆಯಲ್ಲಿ ಸಕ್ಕರೆಯ ಕೊರತೆಯಾಗದಂತೆ ನಿಯಂತ್ರಿಸುವುದು ಸರ್ಕಾರದ ಗುರಿಯಾಗಿದೆ.

ತಿದ್ದುಪಡಿ ಮಾಡಿದ ನೂತನ ಕಾಯ್ದೆಯ ಪ್ರಕಾರ, ಯಾವುದೇ ಸಕ್ಕರೆ ವ್ಯಾಪಾರಿಯು ತಮಗೆ ತಲುಪಿದ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚು ಕಾಲ ಸಕ್ಕರೆಯನ್ನು ದಾಸ್ತಾನು ಇಟ್ಟುಕೊಳ್ಳುವಂತಿಲ್ಲ.

ಕೊಲ್ಕತ್ತಾಗೆ ವಿನಾಯಿತಿ: ಕಾರಣವೇನು?​ದೇಶದಾದ್ಯಂತ 2,000 ಕ್ವಿಂಟಾಲ್ ಮಿತಿಯನ್ನು ನಿಗದಿಪಡಿಸಲಾಗಿದ್ದರೂ, ಕೊಲ್ಕತ್ತಾ ಮತ್ತು ಅದರ ಸುತ್ತಮುತ್ತಲಿನ ಮಹಾನಗರ ಪ್ರದೇಶಗಳಲ್ಲಿ ಹಳೆಯ 4,000 ಕ್ವಿಂಟಾಲ್ ಮಿತಿಯನ್ನೇ ಮುಂದುವರಿಸಲಾಗಿದೆ.

​ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವಾಲಯವು, ಕೊಲ್ಕತ್ತಾ ಪ್ರದೇಶವು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆಯನ್ನು ಪಡೆದುಕೊಂಡು, ದೇಶದ ಪೂರ್ವ ಭಾಗಗಳು ಹಾಗೂ ಈಶಾನ್ಯ ರಾಜ್ಯಗಳಿಗೆ ವಿತರಿಸುವ ಪ್ರಮುಖ ಕೇಂದ್ರವಾಗಿದೆ. ಈ ಸಾರಿಗೆ ಮತ್ತು ಸರಬರಾಜು ಜಾಲವನ್ನು ಗಮನದಲ್ಲಿಟ್ಟುಕೊಂಡು ಕೊಲ್ಕತ್ತಾಗೆ ಗರಿಷ್ಠ ಮಿತಿಯ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.

ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕ್ಕರೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರೀಯ