ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿ ಉಲ್ಬಣಿಸಿರುವ ಭದ್ರತಾ ಸವಾಲುಗಳ ನಡುವೆ, ಭಾರತ ಸರ್ಕಾರವು ತನ್ನ ನಾವಿಕರ ರಕ್ಷಣೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ಈವರೆಗೆ ಸುಮಾರು 2,500ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ವಿವಿಧ ಸ್ಥಳಗಳಿಂದ ಯಶಸ್ವಿಯಾಗಿ ತಾಯ್ನಾಡಿಗೆ ಕರೆತರಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನೌಕಾಯಾನ ಸಚಿವಾಲಯದ ನಿರ್ದೇಶಕರಾದ ಮಂದೀಪ್ ಸಿಂಗ್ ರಾಂಧವಾ ಅವರು ಅಂತರ್-ಸಚಿವಾಲಯದ ಬ್ರೀಫಿಂಗ್‌ನಲ್ಲಿ ಮಾತನಾಡಿ, “ಭಾರತೀಯ ನಾವಿಕರ ಸುರಕ್ಷತೆ ಮತ್ತು ಭದ್ರತೆಯೇ ನಮ್ಮ ಮೊದಲ ಆದ್ಯತೆ. ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು ಸಕ್ರಿಯಗೊಂಡ ದಿನದಿಂದ ಈವರೆಗೆ 6,918 ಕರೆಗಳು ಮತ್ತು 14,605 ಇಮೇಲ್‌ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲೇ 25 ನಾವಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ,” ಎಂದು ತಿಳಿಸಿದರು.
ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದ್ದರೂ, ಸಮುದ್ರ ಮಾರ್ಗದಲ್ಲಿ ಆತಂಕ ಮುಂದುವರಿದಿದೆ. 97,422 ಮೆಟ್ರಿಕ್ ಟನ್ ಕಚ್ಚಾ ತೈಲ ಹೊತ್ತಿರುವ ಭಾರತದ ‘ದೇಶ್ ಗರಿಮಾ’ (Desh Garima) ನೌಕೆಯು ಏಪ್ರಿಲ್ 18 ರಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. 31 ಭಾರತೀಯ ಸಿಬ್ಬಂದಿಯನ್ನು ಹೊಂದಿರುವ ಈ ನೌಕೆಯು ಏಪ್ರಿಲ್ 22 ರಂದು ಮುಂಬೈ ತಲುಪುವ ನಿರೀಕ್ಷೆಯಿದೆ.
ಭಾರತೀಯ ಹಡಗುಗಳ ಮೇಲೆ ಗುಂಡಿನ ದಾಳಿ
ಕಳೆದ 48 ಗಂಟೆಗಳಲ್ಲಿ ಭಾರತದ ಎರಡು ಹಡಗುಗಳಾದ ‘VLCC ಸನ್ಮಾರ್ ಹೆರಾಲ್ಡ್’ (Sanmar Herald) ಮತ್ತು ಬಲ್ಕ್ ಕ್ಯಾರಿಯರ್ ‘ಜಗ್ ಅರ್ನವ್’ (Jag Arnav) ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವಾಗ ಗುಂಡಿನ ದಾಳಿಗೆ ಒಳಗಾಗಿವೆ ಎಂದು ರಾಂಧವಾ ತಿಳಿಸಿದ್ದಾರೆ. ಈ ಘಟನೆಯ ನಂತರ ಎರಡೂ ಹಡಗುಗಳು ಮರಳಿ ಪರ್ಷಿಯನ್ ಗಲ್ಫ್‌ಗೆ ಸೇರಿವೆ. ಅದೃಷ್ಟವಶಾತ್, ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ. ಸರ್ಕಾರವು ಹಡಗಿನ ಮಾಲೀಕರು ಮತ್ತು ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಸದ್ಯಕ್ಕೆ ಭಾರತದ ಎಲ್ಲಾ ಬಂದರುಗಳಲ್ಲಿ ಕಾರ್ಯಚಟುವಟಿಕೆಗಳು ಸಹಜವಾಗಿದ್ದು, ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

