ವಿಯೆಟ್ನಾಂ ಬೋಟ್ ದುರಂತ: ಹೈದರಾಬಾದ್‌ಗೆ ಸುರಕ್ಷಿತವಾಗಿ ತಲುಪಿದ ಆಂಧ್ರದ ಪ್ರವಾಸಿಗರು; ಸರ್ಕಾರದ ನೆರವಿಗೆ ಶ್ಲಾಘನೆ

ವಿಯೆಟ್ನಾಂ ಬೋಟ್ ದುರಂತ: ಹೈದರಾಬಾದ್‌ಗೆ ಸುರಕ್ಷಿತವಾಗಿ ತಲುಪಿದ ಆಂಧ್ರದ ಪ್ರವಾಸಿಗರು; ಸರ್ಕಾರದ ನೆರವಿಗೆ ಶ್ಲಾಘನೆ

​ಹೈದರಾಬಾದ್: ವಿಯೆಟ್ನಾಂನ ಫೂ ಕ್ವೋಕ್ (Phu Quoc) ದ್ವೀಪದ ಕರಾವಳಿಯಲ್ಲಿ ಸಂಭವಿಸಿದ ಭೀಕರ ಸ್ಪೀಡ್‌ಬೋಟ್ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಬದುಕುಳಿದ ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಭಾನುವಾರ ತಡರಾತ್ರಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.​

ತಾಯ್ನಾಡಿಗೆ ಮರಳಿದ ಸಂತ್ರಸ್ತರು ದುರಂತದ ಆ ಭೀಕರ ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಕಷ್ಟದ ಸಮಯದಲ್ಲಿ ತಕ್ಷಣ ಸ್ಪಂದಿಸಿದ ಆಂಧ್ರಪ್ರದೇಶ ಸರ್ಕಾರ ಮತ್ತು ಸಚಿವ ನಾರಾ ಲೋಕೇಶ್ ಅವರ ತಂಡದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕ್ಷಣಾರ್ಧದಲ್ಲಿ ಮುಳುಗಿದ ಬೋಟ್; ಕಣ್ಣೆದುರೇ ಹೋದವು 15 ಜೀವಗಳು!​ ದುರಂತದಿಂದ ಬದುಕುಳಿದ ಮಹಿಪಾಲ್ ಎಂಬುವರು ಮಾಧ್ಯಮಗಳೊಂದಿಗೆ ಮಾತನಾಡಿ ಭೀಕರ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. “ನಾವು ಒಟ್ಟು 30 ಜನರು ಆ ಬೋಟ್‌ನಲ್ಲಿದ್ದೆವು. ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಯೊಂದು ಅಪ್ಪಳಿಸಿತು. ಅಲೆ ಹೊಡೆದ ರಭಸಕ್ಕೆ ನಮ್ಮ ಬೋಟ್ ಪಲ್ಟಿಯಾಯಿತು. ನೋಡನೋಡುತ್ತಿದ್ದಂತೆಯೇ 15 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು” ಎಂದು ಅವರು ಕಣ್ಣೀರು ಹಾಕಿದ್ದಾರೆ.

ಮತ್ತೊಬ್ಬ ಪ್ರವಾಸಿ ರಮೇಶ್ವರ್ ಪ್ರಧಾನ್ ಮಾತನಾಡಿ, “ಇದು ಕಂಪನಿಯ ವತಿಯಿಂದ ಆಯೋಜಿಸಲಾಗಿದ್ದ ಪ್ರೋತ್ಸಾಹಕ ಪ್ರವಾಸ (Incentive Trip) ಆಗಿತ್ತು. ನಮ್ಮ ವಿತರಕರು ಸೇರಿದಂತೆ ಒಟ್ಟು 105 ಜನರು ಪ್ರವಾಸಕ್ಕೆ ತೆರಳಿದ್ದೆವು. ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಹೋಗಲು ನಾವು ಮೂರು ಬೋಟ್‌ಗಳಲ್ಲಿ ಹೊರಟೆವು. ಆದರೆ, ಕೇವಲ ಒಂದು ಕಿಲೋಮೀಟರ್ ಕ್ರಮಿಸುವಷ್ಟರಲ್ಲೇ ಒಂದು ಬೋಟ್ ತಾಂತ್ರಿಕ ಸಮಸ್ಯೆಗೆ ಸಿಲುಕಿ ಹಠಾತ್ತಾಗಿ ಮುಳುಗಿತು. ಅದರಲ್ಲಿ 34 ಜನರಿದ್ದರು, 15 ಜನರನ್ನು ತಕ್ಷಣ ರಕ್ಷಿಸಲಾಯಿತಾದರೂ ಉಳಿದವರು ಜಲಸಮಾಧಿಯಾದರು,” ಎಂದು ಘಟನೆಯ ತೀವ್ರತೆಯನ್ನು ವಿವರಿಸಿದರು.

ಸರ್ಕಾರದ ಸ್ಪಂದನೆಗೆ ಸಂತ್ರಸ್ತರ ಕೃತಜ್ಞತೆ​ಪ್ರವಾಸದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಣೇಶ್ ಮಾತನಾಡಿ, “ಅಪಘಾತ ಸಂಭವಿಸಿದ ತಕ್ಷಣ ಆಂಧ್ರಪ್ರದೇಶ ಸರ್ಕಾರ ನಮಗೆ ಅದ್ಭುತವಾಗಿ ಸ್ಪಂದಿಸಿದೆ. ಸಚಿವ ನಾರಾ ಲೋಕೇಶ್ ಅವರ ತಂಡ ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಮುಂದಿನ ಪ್ರಕ್ರಿಯೆಗಳನ್ನು ಫಾಲೋ-ಅಪ್ ಮಾಡುತ್ತಿದೆ. ಸರ್ಕಾರದ ಬೆಂಬಲ ನಿಜಕ್ಕೂ ನಮಗೆ ಧೈರ್ಯ ತುಂಬಿದೆ,” ಎಂದಿದ್ದಾರೆ.​

ದುರಂತದ ಹಿನ್ನೆಲೆ:​ವಿಯೆಟ್ನಾಂನ ಫೂ ಕ್ವೋಕ್ ಆರ್ಥಿಕ ವಲಯದ ಅಧಿಕಾರಿಗಳ ಪ್ರಕಾರ, ಓಷನ್ ಪರ್ಲ್ ಐಲ್ಯಾಂಡ್ ಕಂಪನಿಗೆ ಸೇರಿದ ಸ್ಪೀಡ್‌ಬೋಟ್ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಮೃತರ ಪಟ್ಟಿಯ ಪ್ರಕಾರ, ಮೃತಪಟ್ಟ 15 ಜನರಲ್ಲಿ ತಮಿಳುನಾಡಿನ 10, ಆಂಧ್ರಪ್ರದೇಶದ 3 ಮತ್ತು ಕೇರಳದ ಇಬ್ಬರು ಪ್ರವಾಸಿಗರು ಸೇರಿದ್ದಾರೆ.

ಅಂತರಾಷ್ಟ್ರೀಯ ಅಪಘಾತ ರಾಷ್ಟ್ರೀಯ