ಕಣ್ಣೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ: ಜಿದ್ದಾಗೆ ಹೊರಟಿದ್ದ ವಿಮಾನ ತುರ್ತು ಲ್ಯಾಂಡಿಂಗ್!

ಕಣ್ಣೂರು ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ: ಜಿದ್ದಾಗೆ ಹೊರಟಿದ್ದ ವಿಮಾನ ತುರ್ತು ಲ್ಯಾಂಡಿಂಗ್!

ಕಣ್ಣೂರು: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ಜಿದ್ದಾಗೆ (Jeddah) ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನದಲ್ಲಿ ಹಾರಾಟದ ಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ತರಾತುರಿಯಲ್ಲಿ ಮರಳಿ ಕಣ್ಣೂರಿನಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.

ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಆಕಾಶದಲ್ಲೇ 18 ಸುತ್ತು ಹೊಡೆದ ವಿಮಾನ!

ಮೂಲಗಳ ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ AXB778 ವಿಮಾನವು ಇಂದು ಮುಂಜಾನೆ ಕಣ್ಣೂರು ವಿಮಾನ ನಿಲ್ದಾಣದಿಂದ ಜಿದ್ದಾಗೆ ಟೇಕ್-ಆಫ್ ಆಗಿತ್ತು. ಆದರೆ ಹಾರಾಟ ಆರಂಭಿಸಿದ ಕೇವಲ 30 ನಿಮಿಷಗಳಲ್ಲೇ ಪೈಲಟ್‌ಗಳಿಗೆ ವಿಮಾನದ ಆಕ್ಸಿಲರಿ ಪವರ್ ಯೂನಿಟ್ (APU) ನಲ್ಲಿ ತಾಂತ್ರಿಕ ದೋಷ ಇರುವುದು ಪತ್ತೆಯಾಗಿದೆ.

ಇಂಧನ ಭಾರ ಕಡಿಮೆ ಮಾಡಲು ಕಸರತ್ತು: ವಿಮಾನವು ಜಿದ್ದಾದಂತಹ ದೂರದ ಪ್ರಯಾಣಕ್ಕೆ ಹೊರಟಿದ್ದರಿಂದ ಅದರಲ್ಲಿ ಇಂಧನದ (Fuel) ಪ್ರಮಾಣ ತುಂಬಾ ಹೆಚ್ಚಾಗಿತ್ತು. ಅಷ್ಟೊಂದು ಭಾರಿ ತೂಕದೊಂದಿಗೆ ರನ್‌ವೇ ಮೇಲೆ ತಕ್ಷಣ ಇಳಿಯುವುದು ಸುರಕ್ಷಿತವಲ್ಲದ ಕಾರಣ, ಇಂಧನದ ತೂಕವನ್ನು ಕಡಿಮೆ ಮಾಡಲು ಪೈಲಟ್‌ಗಳು ಆಕಾಶದಲ್ಲೇ ಸುಮಾರು 18 ಬಾರಿ ವಿಮಾನವನ್ನು ವೃತ್ತಾಕಾರವಾಗಿ ಸುತ್ತಿಸಿದರು.

ಸುಮಾರು ಎರಡು ಗಂಟೆಗಳ ಕಾಲ ಆಕಾಶದಲ್ಲೇ ಆತಂಕದ ಕ್ಷಣಗಳನ್ನು ಕಳೆದ ಪ್ರಯಾಣಿಕರು, ಮುಂಜಾನೆ 9 ಗಂಟೆಯ ಸುಮಾರಿಗೆ ವಿಮಾನವು ಕಣ್ಣೂರು ರನ್‌ವೇನಲ್ಲಿ ಸುರಕ್ಷಿತವಾಗಿ ಇಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ವಿಮಾನ ನಿಲ್ದಾಣದ ತಾಂತ್ರಿಕ ತಂಡವು ವಿಮಾನವನ್ನು ತಪಾಸಣೆಗೆ ಒಳಪಡಿಸಿದೆ. ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಅಂತರಾಷ್ಟ್ರೀಯ ಅಪಘಾತ ರಾಷ್ಟ್ರೀಯ