ಕೊಚ್ಚಿ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ತಮ್ಮ ಪವಿತ್ರ ಯಾತ್ರೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಇಂದು (ಜೂನ್ 15) ಬೆಳಿಗ್ಗೆ ಕೇರಳದ ಕೊಚ್ಚಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕುಮಾರಸ್ವಾಮಿ ಅವರು ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದರು.

ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ಮೊದಲ ಪ್ರಮುಖ ಧಾರ್ಮಿಕ ಯಾತ್ರೆ ಇದಾಗಿದ್ದು, ತಮ್ಮ ಆಪ್ತರು ಹಾಗೂ ಪಕ್ಷದ ಪ್ರಮುಖ ನಾಯಕರ ಜೊತೆಗೂಡಿ ಅವರು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ.
30ಕ್ಕೂ ಹೆಚ್ಚು ಜೆಡಿಎಸ್ ಮುಖಂಡರ ದಂಡು! ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಮತ್ತು ಶಾಸಕರನ್ನೊಳಗೊಂಡ 30 ಸದಸ್ಯರ ಭಕ್ತರ ತಂಡ ಶಬರಿಮಲೆಗೆ ಪ್ರಯಾಣ ಬೆಳೆಸಿದೆ.ಕೊಚ್ಚಿಯ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಮಾಲೆ ಧರಿಸುವ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ, ಇಡೀ ತಂಡವು “ಸ್ವಾಮಿಯೇ ಶರಣಂ ಅಯ್ಯಪ್ಪ” ಘೋಷಣೆಗಳೊಂದಿಗೆ ಶಬರಿಮಲೆ ಬೆಟ್ಟದತ್ತ ಪ್ರಯಾಣ ಮುಂದುವರಿಸಿದೆ.
ಕಟ್ಟುನಿಟ್ಟಿನ ವ್ರತ ಪಾಲನೆ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರು ಕನಿಷ್ಠ 41 ದಿನಗಳ ಕಾಲ ಕಟ್ಟುನಿಟ್ಟಿನ ಬ್ರಹ್ಮಚರ್ಯ ಮತ್ತು ವ್ರತ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕೇಂದ್ರ ಸಚಿವರು ಕೂಡ ಈ ಎಲ್ಲಾ ಧಾರ್ಮಿಕ ನಿಯಮಗಳನ್ನು ಪಾಲಿಸಿಯೇ ಯಾತ್ರೆಗೆ ಸಜ್ಜಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸುಮಾರು 3000 ಅಡಿ ಎತ್ತರದಲ್ಲಿರುವ ಶಬರಿಮಲೆ ಶ್ರೀ ಧರ್ಮಶಾಸ್ತ್ರ ದೇವಸ್ಥಾನವು ದೇಶದ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ದೆಹಲಿಯ ಆರ್‌ಕೆ ಪುರಂನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಹೆಚ್‌ಡಿಕೆ ತಮ್ಮ ಇಡೀ ಶಾಸಕರ ತಂಡದೊಂದಿಗೆ ನೇರವಾಗಿ ಕೇರಳದ ಮೂಲ ಸನ್ನಿಧಿಗೇ ಧಾವಿಸುತ್ತಿರುವುದು ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.

