ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ದೇಹದ ಎಲ್ಲಾ ಅಂಗಾಂಗಗಳು ನಾಪತ್ತೆ! ಕೊಲೆ ಶಂಕೆ ವ್ಯಕ್ತಪಡಿಸಿದ ಪತ್ನಿ

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ದೇಹದ ಎಲ್ಲಾ ಅಂಗಾಂಗಗಳು ನಾಪತ್ತೆ! ಕೊಲೆ ಶಂಕೆ ವ್ಯಕ್ತಪಡಿಸಿದ ಪತ್ನಿ

ನವದೆಹಲಿ:
ವೆನೆಜುವೆಲಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಭಾರತೀಯ ನಾವಿಕ ರಾಕೇಶ್ ಚೌಹಾಣ್ (33) ಅವರ ಮೃತದೇಹ ಭಾರತಕ್ಕೆ ಬಂದಿಳಿದಿದ್ದು, ದೇಶವನ್ನೇ ಬೆಚ್ಚಿಬೀಳಿಸುವ ಆಘಾತಕಾರಿ ಸತ್ಯವೊಂದು ಬೆಳಕಿಗೆ ಬಂದಿದೆ. ಮೃತರ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಯಾವುದೇ ಪ್ರಮುಖ ಒಳಗಿನ ಅಂಗಾಂಗಗಳೇ ಇರಲಿಲ್ಲ ಎಂದು ಭಾರತದಲ್ಲಿ ನಡೆಸಲಾದ ಎರಡನೇ ಮರಣೋತ್ತರ ಪರೀಕ್ಷೆಯ (Post-Mortem) ವರದಿಯಿಂದ ತಿಳಿದುಬಂದಿದೆ.


ರಾಕೇಶ್ ಚೌಹಾಣ್ ಅವರು 2025ರ ನವೆಂಬರ್‌ನಲ್ಲಿ ಮರ್ಚೆಂಟ್ ನೇವಿ ಸೇರಿದ್ದು, ವೆನೆಜುವೆಲಾದಲ್ಲಿ ಹಡಗೊಂದರಲ್ಲಿ ಮರೈನ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮೇ ತಿಂಗಳಲ್ಲಿ ಅವರು ಹಡಗಿನಲ್ಲಿ ತಲೆಸುತ್ತು ಬಂದು ಬಿದ್ದು ಗಾಯಗೊಂಡಿದ್ದಾರೆ ಮತ್ತು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹಡಗಿನ ಕಂಪನಿ ಅವರ ಕುಟುಂಬಕ್ಕೆ ಮಾಹಿತಿ ನೀಡಿತ್ತು. ಆದರೆ, ಸುಮಾರು ಒಂದು ತಿಂಗಳ ನಂತರ ಮೃತದೇಹ ತಾಯ್ನಾಡಿಗೆ ಬಂದಾಗ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.

ಒಂದೂ ಅಂಗಾಂಗ ಬಾಕಿ ಉಳಿದಿಲ್ಲ: ಪತ್ನಿಯ ಕಣ್ಣೀರು

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಕೇಶ್ ಅವರ ಪತ್ನಿ ರಂಜನಾ ಚೌಹಾಣ್, “ನನ್ನ ಪತಿಯನ್ನು ವೆನೆಜುವೆಲಾದಲ್ಲಿ ಕೊಲೆ ಮಾಡಲಾಗಿದೆ ಮತ್ತು ಅವರ ದೇಹದ ಎಲ್ಲಾ ಅಂಗಾಂಗಗಳನ್ನು ತೆಗೆಯಲಾಗಿದೆ. ಹಡಗಿನ ಕಂಪನಿಯ ಪ್ರತಿನಿಧಿಗಳು ನಮಗೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ, ಅವರ ವೈಯಕ್ತಿಕ ವಸ್ತುಗಳನ್ನೂ ಮರಳಿ ಕೊಟ್ಟಿಲ್ಲ. ನಾವು ಕೇವಲ ಮೃತದೇಹ ಬರುವುದನ್ನು ನಿರೀಕ್ಷಿಸುತ್ತಿದ್ದೆವು. ಆದರೆ ಇಲ್ಲಿ ತಂದ ನಂತರ ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದಾಗ, ದೇಹದಲ್ಲಿ ಒಂದೇ ಒಂದು ಅಂಗವೂ ಇಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ. ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯ ಮತ್ತು ಇತರ ಅಧಿಕಾರಿಗಳಿಗೆ ನಾವು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.


ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ರಾಕೇಶ್ ಅವರ ದೇಹದಲ್ಲಿ ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಮೂತ್ರಪಿಂಡ (ಕಿಡ್ನಿ), ಯಕೃತ್ತು (ಲಿವರ್), ಗುಲ್ಮ (ಸ್ಪ್ಲೀನ್), ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್), ಹೊಟ್ಟೆ, ಕರುಳು, ಥೈರಾಯ್ಡ್, ಹೈಯಾಯ್ಡ್ ಮೂಳೆ, ಧ್ವನಿಪೆಟ್ಟಿಗೆ ಹಾಗೂ ಶ್ವಾಸನಾಳ ಸೇರಿದಂತೆ ಎಲ್ಲಾ ಪ್ರಮುಖ ಭಾಗಗಳು ನಾಪತ್ತೆಯಾಗಿವೆ. ಮೃತದೇಹದ ಮೇಲೆ ಹಲವು ಕಡೆ ಹೊಲಿಗೆ ಹಾಕಿದ ಗುರುತುಗಳು ಪತ್ತೆಯಾಗಿವೆ. ಅಂಗಾಂಗಗಳೇ ಇಲ್ಲದ ಕಾರಣ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಭಾರತದ ವೈದ್ಯರಿಗೆ ಸಾಧ್ಯವಾಗಿಲ್ಲ.

ರಂಗಪ್ರವೇಶ ಮಾಡಿದ ಭಾರತೀಯ ರಾಯಭಾರ ಕಚೇರಿ

ಈ ಆಘಾತಕಾರಿ ಪ್ರಕರಣವನ್ನು ‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ (FSUI) ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.

ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವೆನೆಜುವೆಲಾದಲ್ಲಿನ ಭಾರತೀಯ ರಾಯಭಾರ ಕಚೇರಿಯು (Embassy of India, Caracas), ರಾಕೇಶ್ ಚೌಹಾಣ್ ಅವರ ಮೃತದೇಹದ ಅಂಗಾಂಗಗಳನ್ನು ತೆಗೆದುಹಾಕಿ, ದೇಹಕ್ಕೆ ಅಪಚಾರ ಎಸಗಿರುವ ಘಟನೆಯ ಕುರಿತು ಸಂಪೂರ್ಣ ಹಾಗೂ ಗಂಭೀರ ತನಿಖೆ ನಡೆಸುವಂತೆ ವೆನೆಜುವೆಲಾ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಅಧಿಕೃತವಾಗಿ ಪತ್ರ ಬರೆದು ಒತ್ತಾಯಿಸಿದೆ.


ವಿದೇಶದಲ್ಲಿ ದುಡಿಯಲು ಹೋಗುವ ಭಾರತೀಯ ನಾವಿಕರ ಸುರಕ್ಷತೆಯ ಕುರಿತು ಈ ಘಟನೆ ತೀವ್ರ ಆತಂಕವನ್ನು ಮೂಡಿಸಿದ್ದು, ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ