ಕೊಡಗು | ಮಹಿಳೆಯ ಕೊಲೆ ಪ್ರಕರಣ; ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕೊಡಗು | ಮಹಿಳೆಯ ಕೊಲೆ ಪ್ರಕರಣ; ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿ ಓರ್ವ ಮಹಿಳೆಯನ್ನು ಹತ್ಯೆ ಮಾಡಿದ್ದು, ಮತ್ತೊಬ್ಬರನ್ನು ಗಾಯಗೊಳಿಸಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ನಿವಾಸಿ ರಾಜೇಶ್(42)ಎಂಬಾತನೇ ಬಂಧನಕ್ಕೊಳಗಾದ ಆರೋಪಿ. ಆಸ್ತಿ ವಿಚಾರಕ್ಕಾಗಿ ಆತ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಘಟನೆಯ ಹಿನ್ನೆಲೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದ ನಿವಾಸಿಗಳಾದ ಪ್ರೇಮಾ ಹಾಗೂ ಅವರ ತಂಗಿ ವೀಣಾ ಎಂಬುವವರು 2022ರ ಫೆ.6ರಂದು ಪೊನ್ನಂಪೇಟೆಯ ಕೊಡವ ಸಮಾಜದ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುಗುವ ವೇಳೆ ಸಂಜೆ 5ರ ಸುಮಾರಿಗೆ ಅವರ ಮನೆಯ ಸಮೀಪದ ರಸ್ತೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ತಲೆ ಮತ್ತು ಕುತ್ತಿಗೆಗೆ ಮಾರಕಾಸ್ತ್ರದಿಂದ ಚುಚ್ಚಿ ಪ್ರೇಮಾ ಅವರನ್ನು ಕೊಲೆ ಮಾಡಿದ್ದು, ವೀಣಾ ಅವರನ್ನು ಗಂಭೀರ ಗಾಯಗೊಳಿಸಿರುವ ಕುರಿತು ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 302, 307ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ವೀಣಾ ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ಪ್ರೇಮಾ ಅವರ ಪತಿ ಸೋಮಶೇಖರ್ ಅಕ್ಕನ ಮಗನಾದ ರಾಜೇಶ್ ಎಂಬಾತ ಆಸ್ತಿ ವಿಚಾರಕ್ಕಾಗಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಗಾಯಾಳುಗಳು ನಡೆದುಕೊಂಡು ಹೋಗುವ ಹಾಗೂ ರಾಜೇಶನು ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿರುವ ದೃಶ್ಯಾವಳಿ ಕಂಡುಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್ ಮೋಹನ್‌ಕುಮಾರ್, ಕುಟ್ಟ ವೃತ್ತದ ಇನ್ಸ್‌ಪೆಕ್ಟರ್ ಮಂಜಪ್ಪ ಸಿ ಎ, ಶ್ರೀಮಂಗಲ ಪಿಎಸ್‌ಐ ರವೀಂದ್ರ, ಎಎಸ್ಐ ಪಿಎಸ್‌ಐ ಪ್ರಮೋದ್, ಸಿಬ್ಬಂದಿ ಮಹದೇವಸ್ವಾಮಿ, ಪೊನ್ನಂಪೇಟೆ ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಟಿ ಶೆಟ್ಟಿಗೇರಿ ನಿವಾಸಿ ಆರೋಪಿ ರಾಜೇಶನ ಪತ್ತೆಗಾಗಿ ವಿಶೇಷ ತಂಡವು ಸತತ ಎರಡು ವರ್ಷಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕುಂಬ್ರ ಎಂಬಲ್ಲಿ ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಆರೋಪಿ ರಾಜೇಶನ ಮಾವ ಸೋಮಶೇಖರ್ 2021ರಲ್ಲಿ ಮೃತಪಟ್ಟಿದ್ದು, ಮಾವನ ಸಾವಿಗೆ ಅವರ ಪತ್ನಿ ಪ್ರೇಮಾ ಕಾರಣವಾಗಿರಬಹುದು ಹಾಗೂ ತನ್ನ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಪ್ರೇಮಾ ಅವರು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜೇಶನು ಈ ಕೃತ್ಯ ಎಸಗಿ ಮುರುಡೇಶ್ವರಕ್ಕೆ ತೆರಳಿ, ನಂತರ ಭಟ್ಕಳದಲ್ಲಿ ಮೊಬೈಲ್‌ ನಾಶಗೊಳಿಸಿ ಮಹಾರಾಷ್ಟ್ರ ರಾಜ್ಯದ ಪನ್‌ವೇಲ್‌ನಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.

ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ ರಾಮರಾಜನ್ ಶ್ಲಾಘಿಸಿದ್ದಾರೆ

ರಾಜ್ಯ