
ವೇಣೂರು: ವೇಣೂರು ಪೊಲೀಸ್ ಠಾಣೆಯ ಕುಕ್ಕೇಡಿ ಗ್ರಾ.ಪಂಚಾಯತ್ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿ ಘಟಕದಲ್ಲಿ ಸ್ಪೋಟ ಸಂಭವಿಸಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಸೈಯದ್ ಬಶೀರ್ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ಮಾಲೀಕ ಬಶೀರ್ ಮೇಲೆ ಎಫ್ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಮಡಿಕೇರಿ ಕಡೆಗೆ ಪರಾರಿಯಾಗುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸುಳ್ಯದ ಸಂಪಾಜೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ , ಆರೋಪಿಯನ್ನು ಪತ್ತೆ ಹಚ್ಚಲು, ಪುತ್ತೂರು ಟ್ರಾಫಿಕ್ ವಿಭಾಗ ಹಾಗೂ ಸುಳ್ಯ ಪೋಲಿಸರು ಸಹಕಾರ ಮಾಡಿದ್ದಾರೆ, ಇದೀಗ ಆರೋಪಿಯನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬಶೀರ್ ಎಂಬಾತನು ತನ್ನ ತೋಟದ ಶೆಡ್‌ನಲ್ಲಿ, ಕೇರಳ ಮೂಲದ 3 ಜನ ಹಾಗೂ ಹಾಸನ ಮೂಲದ 6 ಜನರನ್ನು ಸೇರಿಸಿಕೊಂಡು, ಸ್ಪೋಟಕ ವಸ್ತುಗಳ ನುರಿತ ಕಾಮಗಾರಿಗಳನ್ನು ತಯಾರಿಸುವ ವ್ಯಕ್ತಿಗಳನ್ನು ನಿಯೋಜಿಸದೆ ಹಾಗೂ ಸ್ಪೋಟಕ ವಸ್ತುಗಳು ಸಿಡಿದರೆ ಜೀವಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತದೆ ಎಂದು ತಿಳಿದಿದ್ದರೂ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ನಿರ್ಲಕ್ಷತನದಿಂದ ಕಾಮಗಾರಿ ನಡೆಸುವಾಗ, ಸ್ಪೋಟಕ ವಸ್ತುವಿನಲ್ಲಿ ಬೆಂಕಿ ಕಾಣಿಸಿ ಸ್ಪೋಟಗೊಂಡ ಪರಿಣಾಮ, ಕೇರಳದ ಸ್ವಾಮಿ, ಕೇರಳದ ವರ್ಗಿಸ್, ಹಾಸನದ ಚೇತನ್ ಎಂಬ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಸ್ಫೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರವಾಗಿ ಬಿದ್ದಿದ್ವು. ಇನ್ನು ಅಕ್ಕಪಕ್ಕದ ಮನೆಯ ಛಾವಣಿಯ ಶೀಟ್ಗಳು ಕೂಡ ಪೀಸ್ ಪೀಸ್ ಆಗಿದ್ದು, ಹಾನಿಗೊಳಗಾಗಿದೆ. ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
