ಮೂಡುಬಿದ್ರೆಯಲ್ಲಿ ಟಿಪ್ಪರ್ ಚಾಲಕನ ವಿಕೃತಿ!! ಚಾಲನೆ ಪ್ರಶ್ನಿಸಿದ ವ್ಯಕ್ತಿಗೆ ರಾಡ್ ನಿಂದ ಹಲ್ಲೆ-ಟಿಪ್ಪರ್ ಚಲಾಯಿಸಿ ಭೀಕರ ಹತ್ಯೆ!!

ಮಂಗಳೂರು: ಅತೀ ವೇಗವಾಗಿ ಚಲಾಯಿಸುತ್ತಿದ್ದ ಟಿಪ್ಪರ್ ಚಾಲಕನನ್ನು ಪ್ರಶ್ನಿಸಿದ ಎನ್ನುವ ಕಾರಣಕ್ಕೆ ಕೋಪಗೊಂಡ ಟಿಪ್ಪರ್ ಚಾಲಕನೋರ್ವ ವಿಕೃತಿ ಮೆರೆದಿದ್ದು,ರಾಡ್ ನಿಂದ ಹಲ್ಲೆಗೈದು, ಟಿಪ್ಪರ್ ಚಲಾಯಿಸಿ ಭೀಕರವಾಗಿ ಹತ್ಯೆ ನಡೆಸಿದ ಘಟನೆಯೊಂದು ಇಲ್ಲಿನ ಹೊರವಲಯದ ಮೂಡುಬಿದ್ರೆ ಕೋಟೆಬಾಗಿಲು ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೋಟೆಬಾಗಿಲು ನಿವಾಸಿ ಫಯಾಜ್(61) ಎಂದು ಗುರುತಿಸಲಾಗಿದ್ದು, ಕೃತ್ಯ ಎಸಗಿದ ಚಾಲಕ ಆರಿಫ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿಯು ಎಂದಿನಂತೆ ಮಸೀದಿಗೆ ತೆರಳುವ ವೇಳೆ ಅತಿವೇಗವಾಗಿ ಟಿಪ್ಪರ್ ಒಂದು ಬಂದಿದ್ದು, ನಡೆದುಕೊಂಡು ಹೋಗುತ್ತಿದ್ದ ಅವರ ಮೇಲೆ ಧೂಳು ಹಾರಿಸಿದ್ದಾನೆ ಎನ್ನುತ್ತಾ ಟಿಪ್ಪರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.ಬಳಿಕ ವ್ಯಕ್ತಿ ಮಸೀದಿಗೆ ಹೋಗಿದ್ದು,ಮರಳಿ ಬರುವಾಗ ಮತ್ತೊಮ್ಮೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೂಡಲೇ ಕೋಪಗೊಂಡ ಟಿಪ್ಪರ್ ಚಾಲಕ ಫಯಾಜ್ ಅವರ ತಲೆಗೆ ರಾಡ್ ನಲ್ಲಿ ಹೊಡೆದು ನೆಲಕ್ಕೆ ಬೀಳಿಸಿ,ಬಳಿಕ ಅವರ ಮೈಮೇಲೆಯೇ ಟಿಪ್ಪರ್ ಚಲಾಯಿಸಿ ಹತ್ಯೆ ನಡೆಸಿ ವಿಕೃತಿ ಮೆರೆದಿದ್ದಾನೆ ಎಂದು ತಿಳಿದುಬಂದಿದೆ.ಘಟನೆಯ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು,ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಅದಾಗಲೇ ಫಯಾಜ್ ನ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕೃತ್ಯ ಎಸಗಿದ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ