ಔರಂಗಜೇಬ್ ಅನ್ನು ಕೊಂಡಾಡಿದ ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿಗೆ ಮುಂಬೈ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು

ಔರಂಗಜೇಬ್ ಅನ್ನು ಕೊಂಡಾಡಿದ ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿಗೆ ಮುಂಬೈ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು

ಮುಂಬೈ: ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರನ್ನು ಹೊಗಳಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ₹20,000 ಮೊತ್ತದ ಸಾಲ್ವೆಂಟ್ ಶ್ಯೂರಿಟಿ ಬಾಂಡ್ ಅನ್ನು ಅಜ್ಮಿ ಸಲ್ಲಿಸಬೇಕು. ಜೊತೆಗೆ, ಮಾರ್ಚ್ 12, 13 ಮತ್ತು 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ತನಿಖಾಧಿಕಾರಿಯೆದುರು ಹಾಜರಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಬದಲಾಯಿಸುವುದಾಗಲಿ ನಾಶಪಡಿಸುವುದಾಗಲಿ ಮಾಡಬಾರದೆಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಜಿ. ರಘುವಂಶಿ ಆದೇಶಿಸಿದ್ದಾರೆ.

ವಿವಾದದ ಹಿನ್ನೆಲೆ

ಮಾರ್ಚ್ 3 ರಂದು ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ, ಮಾಧ್ಯಮಗಳು ಅಬು ಆಜ್ಮಿ ಅವರನ್ನು ಪ್ರಶ್ನಿಸಿದಾಗ, ಔರಂಗಜೇಬ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು.

“ಔರಂಗಜೇಬ್ ಒಬ್ಬ ಉತ್ತಮ ಆಡಳಿತಗಾರನಾಗಿದ್ದರು. ಅವರ ಕಾಲದಲ್ಲಿ ಭಾರತವನ್ನು ‘ಚಿನ್ನದ ಹಕ್ಕಿ’ ಎಂದು ಕರೆಯಲಾಗುತ್ತಿತ್ತು. ದೇಶದ ಜಿಡಿಪಿ 24% ರಷ್ಟಿತ್ತು, ಇದರಿಂದಲೇ ಬ್ರಿಟಿಷರು ಭಾರತಕ್ಕೆ ಆಕರ್ಷಿತರಾದರು. ಔರಂಗಜೇಬ್ ತನ್ನ ಆಡಳಿತಕ್ಕಾಗಿ ಒಂದು ರೂಪಾಯಿಯನ್ನೂ ಸಹ ಸ್ವೀಕರಿಸುತ್ತಿರಲಿಲ್ಲ. ಅವನ ಕಾಲದಲ್ಲಿ ಭಾರತದ ಗಡಿಗಳು ಬರ್ಮಾ ಮತ್ತು ಆಫ್ಘಾನಿಸ್ತಾನದವರೆಗೂ ಹಬ್ಬಿದ್ದವು. ಅವರ ಸೈನ್ಯದಲ್ಲಿ ಹಿಂದೂ ದಂಡನಾಯಕರೂ ಇದ್ದರು. ಆದರೆ ಇತಿಹಾಸವನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಅಜ್ಮಿ ಹೇಳಿದ್ದರು.

ಹಿಂದೂ ಸಂಘಟನೆಗಳ ವಿರೋಧ, ಪ್ರಕರಣ ದಾಖಲು

ಆಜ್ಮಿಯ ಹೇಳಿಕೆಯಿಂದ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ ಎಂದು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹೇಳಿಕೆ ಹಿನ್ನಲೆಯಲ್ಲಿ, ಅಜ್ಮಿಯನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು. ಸಾಧು–ಸಂತರು, ಹಿಂದೂ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಅಜ್ಮಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದವು. ಇದರಿಂದ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳಿಗೆ ಉದ್ದೇಶಪೂರ್ವಕ ಅವಮಾನ ಮಾಡುವುದು), 302 (ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವುದು), 356(1) ಮತ್ತು 356(2) (ಮಾನನಷ್ಟ) ಅಡಿಯಲ್ಲಿ ಅಜ್ಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಾನು ನಿರಪರಾಧಿ ಎಂದ ಅಬು ಆಜ್ಮಿ

ಅಬು ಆಜ್ಮಿ “ತಮ್ಮ ಹೇಳಿಕೆಗಳನ್ನು ಮಾಧ್ಯಮಗಳು ತಪ್ಪಾಗಿ ನಿರೂಪಿಸಿದ್ದರಿಂದ ಈ ವಿವಾದ ಉಂಟಾಗಿದೆ. ನಾನು ಯಾವುದೇ ರೀತಿಯ ತಪ್ಪು ಹೇಳಿಕೆ ನೀಡಿಲ್ಲ, ನನ್ನ ವಿಧಾನಸಭೆ ಅಮಾನತನ್ನು ಕೂಡಾ ರದ್ದುಗೊಳಿಸಬೇಕು” ಎಂದು ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ತೀರ್ಪು ಮತ್ತು ಮಹಾರಾಷ್ಟ್ರ ಸರಕಾರದ ನಿರ್ಧಾರ ಪ್ರಮುಖವಾಗಲಿದೆ.

ಅಪರಾಧ