ಬಂಗಾಳದಲ್ಲಿ ಚುನಾವಣಾ ನಂತರದ ಹಿಂಸಾಚಾರ; ಸುವೇಂದು ಅಧಿಕಾರಿ ಆಪ್ತ ಕಾರ್ಯದರ್ಶಿಯ ಹತ್ಯೆ

ಬಂಗಾಳದಲ್ಲಿ ಚುನಾವಣಾ ನಂತರದ ಹಿಂಸಾಚಾರ; ಸುವೇಂದು ಅಧಿಕಾರಿ ಆಪ್ತ ಕಾರ್ಯದರ್ಶಿಯ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಹಿಂಸಾಚಾರದ ಕಿಚ್ಚು ಜೋರಾಗಿದೆ. ವಿಧಾನಸಭೆ ಚುನಾವಣೆಯ ನಂತರದ ಬೆಳವಣಿಗೆಯಲ್ಲಿ, ಬಿಜೆಪಿಯ ಹಿರಿಯ ನಾಯಕ ಹಾಗೂ ನಿರ್ಗಮಿತ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ (PA) ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಗಂಭೀರ ಆರೋಪ: ತೃಣಮೂಲ ಕಾಂಗ್ರೆಸ್ ವಿರುದ್ಧ ಕಿಡಿ​ಆಸ್ಪತ್ರೆಯ ಹೊರಗೆ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಶಾಸಕ ಕೌಸ್ತವ್ ಬಾಗ್ಚಿ ಮಾತನಾಡಿ, “ಇದು ನೇರವಾಗಿ ತೃಣಮೂಲ ಕಾಂಗ್ರೆಸ್ ನಾಯಕರ ಕೈವಾಡ. ತಪ್ಪಿತಸ್ಥರನ್ನು ಬಂಧಿಸುವವರೆಗೆ ನಾವು ವಿಶ್ರಮಿಸುವುದಿಲ್ಲ,” ಎಂದು ಎಚ್ಚರಿಸಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಟಿಎಂಸಿ ರಾಜ್ಯದಲ್ಲಿ ‘ಭಯೋತ್ಪಾದನೆ’ ಹರಡುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಕಣ್ಣೀರು ಹಾಕುತ್ತಾ ಪ್ರತಿಭಟನೆ ನಡೆಸಿದರು.

ನಡೆದಿದ್ದೇನು? ಮಧ್ಯಮಗ್ರಾಮದಲ್ಲಿ ಅಟ್ಟಹಾಸ​ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಚಂದ್ರನಾಥ್ ರಥ್ ಅವರು ಕಾರಿನಲ್ಲಿ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಾಲ್ಕು ಬೈಕ್‌ಗಳಲ್ಲಿ ಬಂದ ಹಂತಕರು ಚಂದ್ರನಾಥ್ ಅವರ ವಾಹನವನ್ನು ಅಡ್ಡಗಟ್ಟಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಚಂದ್ರನಾಥ್ ರಥ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸಿರ್ಹತ್‌ನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ದಾಳಿ​ ಹಿಂಸಾಚಾರದ ಸರಣಿ ಇಲ್ಲಿಗೆ ನಿಂತಿಲ್ಲ. ಇದೇ ಜಿಲ್ಲೆಯ ಬಸಿರ್ಹತ್‌ನಲ್ಲಿ ರೋಹಿತ್ ರಾಯ್ ಎಂಬ ಬಿಜೆಪಿ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸದ್ಯ ರೋಹಿತ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಒಂದೇ ದಿನದಲ್ಲಿ ನಡೆದ ಈ ಅವಳಿ ದಾಳಿಗಳು ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿವೆ.

ಪೊಲೀಸ್ ತನಿಖೆ ಮತ್ತು ಡಿಜಿಪಿ ಹೇಳಿಕೆ​ ಘಟನೆಯ ಕುರಿತು ಮಾಹಿತಿ ನೀಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಸಿದ್ಧನಾಥ್ ಗುಪ್ತಾ ಅವರು, “ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹತ್ಯೆಗೆ ಬಳಸಲಾದ ಶಂಕಿತ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹಂತಕರು ನಾಲ್ಕು ಬೈಕ್‌ಗಳಲ್ಲಿ ಬಂದಿದ್ದರು ಎಂಬ ಮಾಹಿತಿ ಲಭ್ಯವಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

ರಾಜಕೀಯ ಸಂಘರ್ಷ: ಆರೋಪ-ಪ್ರತ್ಯಾರೋಪ​ಬಿಜೆಪಿ ಈ ಹತ್ಯೆಯನ್ನು “ರಾಜಕೀಯ ಪ್ರೇರಿತ ಸಂಚು” ಎಂದು ಕರೆದಿದ್ದು, ತೃಣಮೂಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಆದರೆ ಟಿಎಂಸಿ ಈ ಆರೋಪವನ್ನು ತಿರಸ್ಕರಿಸಿದ್ದು, ತಮ್ಮ ಪಕ್ಷದ ಕಾರ್ಯಕರ್ತರ ಮೇಲೆಯೂ ದಾಳಿಗಳು ನಡೆಯುತ್ತಿವೆ ಎಂದು ಪ್ರತ್ಯಾರೋಪ ಮಾಡಿದೆ. ಒಟ್ಟಾರೆಯಾಗಿ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರವು ಬೂದಿ ಮುಚ್ಚಿದ ಕೆಂಡದಂತಿದ್ದು, ಸಾರ್ವಜನಿಕರಲ್ಲಿ ಭೀತಿ ನಿರ್ಮಾಣವಾಗಿದೆ.

ಅಪರಾಧ ರಾಜಕೀಯ ರಾಷ್ಟ್ರೀಯ