ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿಯಾಗಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ!

ಕಾಮನ್‌ವೆಲ್ತ್ ಗೇಮ್ಸ್ 2026: ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿಯಾಗಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ!

ನವದೆಹಲಿ:ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದ ಭಾರತೀಯ ಪದಕ ವಿಜೇತ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಅಧಿಕೃತ ನಿವಾಸದಲ್ಲಿ (7, ಲೋಕ್ ಕಲ್ಯಾಣ್ ಮಾರ್ಗ) ಭೇಟಿಯಾಗಿ ಅಭಿನಂದಿಸಿದರು.

ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಡ್ಸೆ ಉಪಸ್ಥಿತರಿದ್ದರು.

ಕ್ರೀಡಾಪಟುಗಳೊಂದಿಗೆ ಆತ್ಮೀಯ ಸಂವಾದ: ​ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಕ್ರೀಡಾಪಟುವಿನ ಸಾಧನೆಯನ್ನು ಶ್ಲಾಘಿಸಿದರು ಹಾಗೂ ಕ್ರೀಡಾಕೂಟದಲ್ಲಿ ಅನುಭವಿಸಿದ ಕ್ಷಣಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ವಿಡಿಯೋ ಹಂಚಿಕೊಂಡ ಪ್ರಧಾನಿ, “ನಮ್ಮ ಪ್ರತಿಯೊಬ್ಬ ಕ್ರೀಡಾಪಟುವೂ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರ ಯಶಸ್ಸು ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿಯಾಗಲಿದೆ,” ಎಂದು ಬರೆದುಕೊಂಡಿದ್ದಾರೆ.

​ಸಂವಾದದ ವೇಳೆ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಕ್ಷಿ ಚೌಧರಿ ಪ್ರಧಾನಿಯವರನ್ನು ಮಾತನಾಡಿಸಿದಾಗ, ಪ್ರಧಾನಿ ಮೋದಿ ಅವರು “ಜೋ ಖೇಲೇಗಾ, ವೋ ಖಿಲೇಗಾ” (ಯಾರು ಆಡುತ್ತಾರೋ, ಅವರು ಬೆಳಗುತ್ತಾರೆ) ಎಂಬ ಜನಪ್ರಿಯ ಘೋಷಣೆಯನ್ನು ಪುನರುಚ್ಚರಿಸಿ, ದೇಶವಾಸಿಗಳು ಸದಾ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಜುಲೈ 23 ರಿಂದ ಆಗಸ್ಟ್ 2 ರವರೆಗೆ ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆದ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ, 9 ಕಾಂಸ್ಯ) ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಕಾಯ್ದುಕೊಂಡಿದೆ.​

ಕುಸ್ತಿ, ಶೂಟಿಂಗ್, ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್‌ನಂತಹ ಭಾರತದ ಸಾಂಪ್ರದಾಯಿಕ ಪದಕ-ಗಳಿಕೆಯ ಕ್ರೀಡೆಗಳು ಈ ಬಾರಿಯ ಕೂಟದಲ್ಲಿ ಇಲ್ಲದಿದ್ದರೂ, ಭಾರತೀಯ ಕ್ರೀಡಾಪಟುಗಳು ಬಾಕ್ಸಿಂಗ್, ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ಜೂಡೋ ಮತ್ತು ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಬಾಕ್ಸಿಂಗ್ ವಿಭಾಗವೊಂದರಲ್ಲೇ ಭಾರತ 7 ಚಿನ್ನದ ಪದಕಗಳು ಸೇರಿದಂತೆ ಒಟ್ಟು 10 ಪದಕಗಳನ್ನು ಬಾಚಿಕೊಂಡಿರುವುದು ವಿಶೇಷ.

ಕ್ರೀಡೆ ರಾಜಕೀಯ ರಾಷ್ಟ್ರೀಯ