ದೃಢ ಸಂಕಲ್ಪದಿಂದ ಹಸಿವನ್ನು ಗೆಲ್ಲಲು ಸಾಧ್ಯ -ರಾಮಚಂದ್ರಾಪುರ ಶ್ರೀ

ದೃಢ ಸಂಕಲ್ಪದಿಂದ ಹಸಿವನ್ನು ಗೆಲ್ಲಲು ಸಾಧ್ಯ -ರಾಮಚಂದ್ರಾಪುರ ಶ್ರೀ

ಇಂಟರ್ಮಿಟೆಂಟ್ ಫಾಸ್ಟಿಂಗ್’ (Intermittent Fasting) – ‘ಬ್ರಂಚ್’ (Brunch) ಹೊಸ ಸಂಶೋಧನೆಯಲ್ಲ.

ಜಠರಾಗ್ನಿ ನಮ್ಮ ವಶವಾದಾಗ ಸಹಜ ಉಪವಾಸ ಸಾಧ್ಯ

ಮನಸ್ಸಿಗೂ ಜಠರಾಗ್ನಿಗೂ ಇದೆ ಗಾಢವಾದ ಸಂಬಂಧ – ಮನಸ್ಸಿಗೆ ದುಃಖವಾದರೆ ಹಸಿವಾಗುವುದಿಲ್ಲ.

ಗೋಕರ್ಣ: ಸಾಮಾನ್ಯ ವ್ಯಕ್ತಿಯು ಉಸಿರು ಕಟ್ಟಿ ಕುಳಿತಾಗ ಮರಣ ಸಂಭವಿಸಬಹುದು. ಆದರೆ ಯೋಗಿ ಉಸಿರನ್ನು ಕಟ್ಟಿದಾಗ ಆತ ಸಮಾಧಿ ಸ್ಥಿತಿಗೆ ಏರುತ್ತನೆ. ಭಗವದಾನಂದವನ್ನು ಹೊಂದುತ್ತಾನೆ. ಉಸಿರನ್ನು ನಮ್ಮ ಅಧೀನವಾಗಿಸುವ ಕಲೆ ನಮಗೆ ಕರಗತವಾಗಬೇಕು. ಹಾಗೆಯೇ ಜಠರಾಗ್ನಿಯನ್ನು ನಿಯಂತ್ರಣಕ್ಕೆ ಪಡೆದರೆ ಸಹಜ ಉಪವಾಸ ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 10.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಉಪವಾಸ’ದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಶರೀರದಲ್ಲಿ ಎಲ್ಲವೂ ಕೂಡ ನಮ್ಮ ಇಚ್ಛೆಗೆ ಸಹಕಾರಿಯಾಗುವಂತೆ ಭಗವಂತ ರಚಿಸಿದ್ದಾನೆ. ಆದರೆ ಶರೀರಕ್ಕೆ ಹೇಗೆ ಸಂವಹನ ಮಾಡಬೇಕು ಎಂಬ ವಿಷಯ ನಮಗೆ ತಿಳಿದಿರಬೇಕು. ಜಠರಾಗ್ನಿಗೆ ಹಿತ – ಮಿತ – ಮೇಧ್ಯಾಶನವನ್ನು ನೀಡುತ್ತಿದ್ದಾಗ ಅಗ್ನಿಯು ನಮ್ಮ ವಶವಾಗುತ್ತದೆ. ನಾವು ಹೇಳಿದಂತೆ ಕೇಳಲು ಆರಂಭಿಸುತ್ತದೆ. ನಾವು ಅದಕ್ಕೆ ಬೇಕಾಗಿರುವುದನ್ನು ಕೊಟ್ಟಾಗ ಅದು ನಾವು ಹೇಳಿದಂತೆ ಕೇಳುತ್ತದೆ. ಇದನ್ನು ಪ್ರಾಣಿ ಹಾಗೂ ಮನುಷ್ಯರಲ್ಲೂ ಕಾಣಬಹುದಾಗಿದ್ದು, ಇದು ದೇವತೆಗಳಿಗೂ ಅನ್ವಯವಾಗುತ್ತದೆ. ನಾಳೆ ಹಸಿವಾಗಬಾರದು ಎಂದು ವೈಶ್ವಾನರರೂಪಿ ಜಠರಾಗ್ನಿಗೆ ಸಮರ್ಪವಾದ ರೀತಿಯಲ್ಲಿ ಸಂದೇಶವನ್ನು ನೀಡಿದಾಗ ನಮಗೆ ಹಸಿವಿನ ಅರಿವು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಉಪ್ಪಿಟ್ಟಿನ ಕುರಿತಾಗಿ ಆಲೋಚಿಸುತ್ತಾ ಉಪವಾಸವನ್ನು ಮಾಡುವುದು ಸರಿಯಾದ ಕ್ರಮವಲ್ಲ. ದೇವರು ಕೊಟ್ಟಿರುವ ಮನಸ್ಸಿಗೆ ಅಪಾರವಾದ ಶಕ್ತಿಯಿದ್ದು, ನಾವು ಸರಿಯಾಗಿ ಸಂಕಲ್ಪಿಸಿದಾಗ ಆ ಕಾರ್ಯ ನೆರವೇರುತ್ತದೆ. ಸಂಕಲ್ಪ ಗಟ್ಟಿಯಿದ್ದಾಗ ಪ್ರಪಂಚವನ್ನೇ ಬದಲಾಯಿಸಬಹುದು. ದೃಢ ಸಂಕಲ್ಪ ಮಾಡಿದರೆ ಹಸಿವಾಗುವುದಿಲ್ಲ. ಮನಸ್ಸಿಗೆ ಆ ಶಕ್ತಿಯಿದ್ದು, ಇವೆಲ್ಲವೂ ಯಾವುದೋ ಕಾಲದ ಮಾತಲ್ಲ. ಇಂದಿಗೂ ಸಾಧಕರ ಅನುಭವದಲ್ಲಿ ಇರುವ ಸಂಗತಿಗಳು. ಯಾರು ಬೇಕಾದರೂ ಇದನ್ನು ಅನುಭವಿಸಿ ಪರೀಕ್ಷಿಸಬಹುದು. ಮನಸ್ಸಿಗೂ ಜಠರಾಗ್ನಿಗೆ ಗಾಢವಾದ ಸಂಬಂಧವಿದ್ದು, ಮನಸ್ಸಿಗೆ ದುಃಖವಾದರೆ ಹಸಿವಾಗುವುದಿಲ್ಲ. ಇದು ಅಗ್ನಿಯ ಮೇಲೆ ಮನಸ್ಸಿನ ಪರಿಣಾಮವನ್ನು ಸೂಚಿಸುತ್ತದೆ. ಇದನ್ನು ಆಧುನಿಕ ವಿಜ್ಞಾನವೂ ಒಪ್ಪಿದ್ದು, ರಷ್ಯಾದ ವಿಜ್ಞಾನಿ ಇವಾನ್ ಪಾವ್ಲೋವ್ ಈ ಬಗ್ಗೆ ಸುಧೀರ್ಘ ಸಂಶೋಧನೆಯನ್ನು ನಡೆಸಿದ್ದು, ಈ ಸಂಶೋಧನೆಗೆ ನೋಬೆಲ್ ಪುರಸ್ಕಾರವೂ ದೊರೆತಿದೆ.

ಆಹಾರ ದೇಹದಲ್ಲಿದಾಗ ಮನಸ್ಸಿನಲ್ಲಿ ಆಲೋಚನೆಗಳ ಅಲೆ ಏಳುವುದು ಸಾಮಾನ್ಯ. ಏಕೆಂದರೆ ಆಹಾರಕ್ಕೆ ತಾಮಸ ಗುಣವಿದೆ. ಉಪವಾಸವು ತಾಮಸವನ್ನು ದೂರವಿಡುವ ಪ್ರಕ್ರಿಯೆಯಾಗಿದ್ದು, ಖಾಲೆ ಹೊಟ್ಟೆಯು ಧ್ಯಾನಾದಿಗಳಿಗೆ ಪ್ರಶಸ್ತವಾಗಿದೆ. ಧ್ಯಾನ -ಉಪಾಸನೆಗಳನ್ನು ಬ್ರಾಹ್ಮೀ ಮುಹೂರ್ತ ಹಾಗೂ ಸಂಧ್ಯಾಕಾಲದ ಸಮಯದಲ್ಲಿ ಮಾಡಲು ಭಾರತೀಯ ಪರಂಪರೆ ಸೂಚಿಸುತ್ತದೆ. ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಈ ಸಮಯದಲ್ಲಿ ಖಾಲಿ ಹೊಟ್ಟೆ ಇರುತ್ತದೆ. ಇದು ಏಕಾಗ್ರತೆಗೆ ಸಹಕಾರಿ ಎಂದ ಶ್ರೀಗಳು, ಉಪವಾಸವು ಸಾಧಕನಿಗೆ ಮುಕ್ತಿಯನ್ನು, ಸಾಮಾನ್ಯ ಮನುಷ್ಯನಿಗೆ ಜೀರ್ಣಶಕ್ತಿಯನ್ನು ಸರಿಪಡಿಸಿ ಸಹಕರಿಸುತ್ತದೆ ಎಂದು ವಿವರಿಸಿದರು.

೧೫ ದಿನಗಳಿಗೊಮ್ಮೆ ಮಾಡುವ ಉಪವಾಸದಿಂದ ರೋಗಗಳು ಬರುವುದಿಲ್ಲ ಎಂದು ಆಧುನಿಕ ಸಂಶೋಧನೆಯೊಂದು ಹೇಳುತ್ತಿದೆ. ಆದರೆ ಇದು ನಮ್ಮಲ್ಲಿ ಪರಂಪರಾಗತವಾಗಿ ಏಕಾದಶಿ ಎಂಬ ಹೆಸರಿನಲ್ಲಿ ಸಹಸ್ರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಇದು ಭಾರತೀಯ ಪರಂಪರೆಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ ಎಂದರು.

ಇಂಟರ್ಮಿಟೆಂಟ್ ಫಾಸ್ಟಿಂಗ್’ (Intermittent Fasting) – ‘ಬ್ರಂಚ್’ (Brunch) ಹೊಸ ಸಂಶೋಧನೆಯಲ್ಲ.

ಮಹಾಭಾರತದಲ್ಲಿ ಭೀಷ್ಮರು ಮಧ್ಯಾಹ್ನದ ಸಮಯದಲ್ಲಿ ಹಾಗೂ ಸಂಜೆಯ ನಂತರ ಊಟ ಮಾಡುವುದನ್ನು ಸೂಚಿಸಿದ್ದು, ಇವೆರಡನ್ನು ಹೊರತು ಪಡಿಸಿ ಬೇರೆ ಏನನ್ನೂ ತಿನ್ನಬಾರದು. ಇದನ್ನು ನಿತ್ಯ ಜೀವನದ ಕ್ರಮವಾಗಿಸಿಕೊಂಡರೆ ಅವನನ್ನು ‘ನಿತ್ಯೋಪವಾಸಿ’ ಎನ್ನಲಾಗುತ್ತದೆ ಎಂದಿದ್ದಾರೆ. ಹಾಗಾಗಿ ಇಂದು ಜನಪ್ರಿಯವಾಗುತ್ತಿರುವ ‘ಇಂಟರ್ಮಿಟೆಂಟ್ ಫಾಸ್ಟಿಂಗ್’ ಹೊಸ ಸಂಶೋಧನೆಯಲ್ಲ. ಭೀಷ್ಮರು ಸುಮಾರು ಐದು ಸಾವಿರ ವರ್ಷಗಳ ಮೊದಲೇ ಇದನ್ನು ಹೇಳಿದ್ದಾರೆ. ಹಾಗೆಯೇ ಇಂದು ಜನಪ್ರಿಯವಾಗಿರುವ ಆಧುನಿಕರ ‘ಬ್ರಂಚ್’ ಕೂಡ ಸರಿಯಾದ ಕ್ರಮವಾಗಿದೆ. ಆದರೆ ಇವುಗಳ ಜೊತೆಗೆ ಗಂಟೆಗಂಟೆಗೆ ಬೇರೆ ಆಹಾರ ಸ್ವೀಕರಿಸುವುದು ಸರಿಯಲ್ಲ. ಅದು ದೇಹಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟರು.

ಸಿದ್ದಾಪುರ ಹವ್ಯಕ ಮಂಡಲದ ಅಂಬಾಗಿರಿ,ಹರೀಶಿಮಂಗಳೂರು, ಹಾರ್ಸಿಕಟ್ಟ, ಬಿದ್ರಕಾನ, ಸಿದ್ದಾಪುರ ವಲಯಗಳ ಪರವಾಗಿ ಸುರೇಶ ವೆಂಕಟ್ರಮಣ ಹೆಗಡೆ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸಿದ್ದಾಪುರ ಹವ್ಯಕ ಮಂಡಲದ ಸತೀಶ ಹೆಗಡೆ ಆಲ್ಮನೆ, ರಾಮಮೂರ್ತಿ ಹೆಗಡೆ ಗೋಳಗೋಡು, ಸೀತಾರಾಮ ಹೆಗಡೆ ಸುಳಗಾರು, ಕಲ್ಪನಾ ತಲವಾಟ, ಚಿದಂಬರ ಗೊಳಿಕೈ, ವೀಣಾ ಭಟ್ ಶಿರಸಿ, ಮನು ಪಟೇಲ್, ಪ್ರತಿಭಾ ಅಂಗಡಿ, ನವೀನ ಯಾಣ, ದರ್ಶನ ಹೆಗಡೆ ಕಂತನಳ್ಳಿ, ದಿನ ಪ್ರಧಾನರಾದ ರಾಮ ಬಾಲಕೃಷ್ಣ ಹೆಗಡೆ ಬಡಗಣಿ ಉಪಸ್ಥಿತರಿದ್ದರು.

ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ