
ಮಡಿಕೇರಿ ಸೆ.15 : ಶೂ ಒಳಗೆ ಸೇರಿಕೊಂಡಿದ್ದ ನಾಗರಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡುವಲ್ಲಿ ಉರಗ ರಕ್ಷಕ ಸ್ನೇಕ್ ಸುರೇಶ್ ಪೂಜಾರಿ ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಗ್ರಾಮದ ಶಾಲಿ ಎಂಬುವವರು ಮನೆಯ ಹೊರ ಭಾಗದಲ್ಲಿ ಇಟ್ಟಿದ್ದ ಶೂ ಒಳಗೆ ಹಾವು ಸೇರಿಕೊಂಡಿತ್ತು. ಇಂದು ಬೆಳಗ್ಗೆ ಕೆಲಸಕ್ಕೆಂದು ತೆರಳಲು ಶೂ ತೆಗೆದಾಗ ಹಾವು ಇರುವುದು ಕಂಡು ಬಂತು. ಆತಂಕಗೊಂಡ ಶಾಲಿ ಅವರು ತಕ್ಷಣ ಸ್ನೇಕ್ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಸುರೇಶ್ ಹಾವನ್ನು ಸೆರೆ ಹಿಡಿದು ನಂತರ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು. ಮನೆಯ ಹೊರ ಭಾಗದಲ್ಲಿರುವ ಪಾದರಕ್ಷೆ ಮತ್ತಿತರ ವಸ್ತುಗಳನ್ನು ಬಳಸುವಾಗ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಗಮನಿಸಬೇಕು. ಹಾವುಗಳು ಕಂಡು ಬಂದಲ್ಲಿ ಕೊಲ್ಲದೆ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಸುರೇಶ್ ಮನವಿ ಮಾಡಿದ್ದಾರೆ

