
ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಜಾರಿ ಮಾಡಿ ಘೋಷಣೆ ಮಾಡಿದರು.


ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಬಗ್ಗೆ ವಿವರಿಸಿದರು. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದ್ದು, ಯಾವುದೇ ಜಾತಿ, ಧರ್ಮ, ಭಾಷೆ ಬೇಧವಿಲ್ಲದೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಗೃಹಜ್ಯೋತಿ ಜಾರಿ
ಮೊದಲ ಗ್ಯಾರಂಟಿ ಗೃಹಜ್ಯೋತಿ ಜಾರಿಗೆ ಸಂಪುಟ ಸಭೆ ನಿರ್ಧರಿಸಿದ್ದು, ಎಲ್ಲರಿಗೂ 200 ಯುನಿಟ್ ವರೆಗೂ ಉಚಿತವಾಗಿ ವಿದ್ಯುತ್ ನೀಡಲಾಗುವುದು. 12 ತಿಂಗಳ ಸರಾಸರಿ ಆಧಾರದಲ್ಲಿ ವಿದ್ಯುತ್ ಬಿಲ್ ಪರಿಗಣೆ ಮಾಡಲಾಗುತ್ತಿದ್ದು, 12 ತಿಂಗಳಲ್ಲಿ ಎಷ್ಟು ಬಳಸುತ್ತಾರೋ ಅದರ ಸರಾಸರಿ ಪಡೆದುಕೊಂಡು 10% ಹೆಚ್ಚು ವಿದ್ಯುತ್ ನೀಡುತ್ತೇವೆ. 12 ತಿಂಗಳ ಆವರೇಜ್ ವಿದ್ಯುತ್ ಬಳಕೆ ಮೇಲೆ 10% ನೀಡುತ್ತೇವೆ. ಸರಾಸರಿ ಬಳಕೆಗೆ 10% ಸೇರಿಸಿ ಹೆಚ್ಚುವರಿ ವಿದ್ಯುತ್ ನೀಡುತ್ತೇವೆ. 200 ಯೂನಿಟ್ ವಿದ್ಯುತ್ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಜುಲೈ 1ರಿಂದ ಆಗಸ್ಟ್ 1ರವರೆಗೆ ಬಳಸುವ ವಿದ್ಯುತ್ ಬಳಕೆಗೆ ಬಿಲ್ ಎಂದು ತಿಳಿಸಿದರು
ಗೃಹಲಕ್ಷ್ಮೀ ಯೋಜನೆ
ಮನೆ ಯಜಮಾನಿಗೆ ತಿಂಗಳಿಗೆ 2000 ರೂ. ಜಮಾ ಮಾಡುತ್ತೇವೆ. ಹಾಗಾಗಿ ಈಗ ಅವರು ಅಕೌಂಟ್ ನಂಬರ್, ಆಧಾರ್ ಕಾರ್ಡ್ ಕೊಡಬೇಕು. ಅಲ್ಲದೇ ಇದಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಜೂನ್ 15ರಿಂದ ಜುಲೈ 15ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬಳಿಕ ದಾಖಲೆಗಳನ್ನು ಪರಿಶೀಲಿಸಿ ಆಗಸ್ಟ್ 15ರಿಂದ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಹಣ ಹಾಕಲಾಗುವುದು. ಇದು ಬಿಪಿಎಲ್ ಹಾಗೂ ಎಪಿಲ್ ಕಾರ್ಡುದಾರರಿಗೆ ಅನ್ವಯವಾಗಲಿದೆ ಎಂದರು.
ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವೀಕಲಕರಿಗೆ ಈಗಾಲೇ ಬರುತ್ತಿರುವ ಪಿಂಚಣಿ ಜೊತೆಗೆ ಈ ಎರಡು ಸಾವಿರ ರೂಪಾಯಿ ಮನೆ ಯಜಮಾನಿಗೆ ಸಿಗಲಿದೆ