
ಉಪ್ಪಿನಂಗಡಿ: ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ವ್ಯಕ್ತಿಯೋರ್ವರು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಸೋಮವಾರ ನಡೆದಿದೆ.


ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಸಗುಣ ಎಂದು ಗುರುತಿಸಲಾಗಿದೆ. ಪೆದಮಲೆಯ ಜಯಂತ ಕುಮಾರ್ ಎಂಬವರ ಮನೆಗೆ ಕೆಲಸಕ್ಕೆಂದು ಬಂದಿದ್ದ ಇವರು, ಸಮೀಪದ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದಾಗ ಪೊದೆಗಳ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ವಿದ್ಯುತ್ ಪ್ರವಹಿಸಿ ಅವರು ಅಲ್ಲೇ ಬಿದ್ದಿದ್ದ ಸಗುಣ ಅವರನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಈ ಬಗ್ಗೆ ಸಗುಣ ಅವರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯ ಬಗ್ಗೆ ಮೆಸ್ಕಾಂ ಇಲಾಖೆ ಯಾವುದೇ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಹಾಗೂ ವಿದ್ಯುತ್ ತಂತಿಯಿರುವ ಜಾಗದಲ್ಲಿ ಸಗುಣ ಹಾಗೂ ಅವರ ಪತ್ನಿಯನ್ನು ಕೆಲಸಕ್ಕೆ ನೇಮಿಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ