ಉಪ್ಪಿನಂಗಡಿ: ಅನಧಿಕೃತವಾಗಿ ಜಾನುವಾರುಗಳನ್ನು
ಸಾಗಿಸಲು ಸಿದ್ಧತೆ ನಡೆಸಿರುವುದನ್ನು ತಿಳಿದ ಸ್ಥಳೀಯ
ಸಾಮಾಜಿಕ ಕಾರ್ಯಕರ್ತರೋರ್ವರು ಉಪ್ಪಿನಂಗಡಿ
ಪೊಲೀಸರಿಗೆ ನೀಡಿದ ಮಾಹಿತಿಯ ಬೆನ್ನಿಗೆಯೇ ಮಾಹಿತಿ ನೀಡಿದವರಿಗೆ ತಂಡವೊಂದು ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಪೊಲೀಸರಿಗೆ ಮಾಹಿತಿ ನೀಡಿರುವುದನ್ನು ಅಕ್ರಮ ದಂಧೆ ನಡೆಸುವವರಿಗೆ ಸೋರಿಕೆ ಮಾಡಿದವರು ಯಾರು ಎಂಬ ಪ್ರಶ್ನೆ ಉದ್ಭವಿಸುವಂತಾಗಿದೆ.ವಾರದ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಕಂಬಳದ ವೇಳೆ
ನಿರ್ಜನ ಪ್ರದೇಶವೊಂದರಲ್ಲಿ ಐದಾರು ಜಾನುವಾರು ಗಳನ್ನು ಕಟ್ಟಿ ಹಾಕಿರುವ ಬಗ್ಗೆ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತರೋರ್ವರಿಗೆ ಮಾಹಿತಿ ಬಂದಿತ್ತು. ಕಂಬಳದ ದಿನವಾದ್ದರಿಂದ ಯಾರಿಗೂ ಸಂಶಯ ಬಾರದಂತೆ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ ಉದ್ದೇಶವನ್ನು
ಅರಿತ ಅವರು ಈ ಮಾಹಿತಿಯನ್ನು ನೇರ ಪೊಲೀಸರಿಗೆ
ತಲುಪಿಸಿದ್ದರು. ಪೊಲೀಸರಿಂದ ಸಕಾಲಿಕ ಕ್ರಮದ
ನಿರೀಕ್ಷೆಯಲ್ಲಿದ್ದ ಅವರಿಗೆ ಅದಾದ ಕೆಲ ಕ್ಷಣಗಳಲ್ಲೇ
ಜಾನುವಾರುಗಳನ್ನು ಕಟ್ಟಿ ಹಾಕಿದ್ದ ಗುಂಪಿಗೆ ಸಂಬಂಧಿಸಿದ ವ್ಯಕ್ತಿಗಳು ಸಂಪರ್ಕಿಸಿ ಬೆದರಿಕೆಯೊಡ್ಡಿದ್ದು, ತಾನು ಪೊಲೀಸರಿಗೆ ನೀಡಿದ ಮಾಹಿತಿ ಇವರಿಗೆ ಹೇಗೆ ತಲುಪಿತು ಎಂದು ಸಾಮಾಜಿಕ ಕಾರಕರ್ತನಲ್ಲಿ ದಿಗ್ರಮೆ ಮೂಡಿಸುವಂತಾಗಿದೆ.ಪದೇ ಪದೇ ಭಿನ್ನ ಭಿನ್ನ ವ್ಯಕ್ತಿಗಳು ಸಂಪರ್ಕಿಸಿ ಬೆದರಿಕೆಯೊಡ್ಡಿದಾಗ ಕಂಗಾಲಾದ ಈ ಸಾಮಾಜಿಕ ಕಾರ್ಯಕರ್ತ ಘಟಿಸಿದ ಘಟನೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳನ್ನು ಸಂಪರ್ಕಿಸಿ, ನನ್ನ ಜೀವಕ್ಕೆ ಏನಾದರೂ ಅಪಾಯ ಸಂಭವಿಸಿದರೆ ಈ ಮಾಹಿತಿ ನೀಡಿದ ಘಟನೆಯೇ ಕಾರಣವಾಗಿರುತ್ತದೆ ಎಂದು ತಿಳಿಸಿದ್ದಾರೆ. ಪರಿಸರದಲ್ಲಿ ಮರುಳು ಮಾಫಿಯಾದ ಬಗ್ಗೆ ಪೊಲೀಸರಿಗೆ ನೀಡಿದ ಮಾಹಿತಿಯೂ ಮಾಫಿಯಾ ತಂಡಕ್ಕೆ ರವಾನೆಯಾಗುತ್ತಿರುವ ಬಗ್ಗೆ ವ್ಯಾಪಕ ಆರೋಪಗಳಿವೆ.ಈ ಬಗ್ಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

