ನೀರಿನಲ್ಲಿ ಬಂಡಿ ಉತ್ಸವ :ಕುಕ್ಕೆ ಜಾತ್ರೆ ಸಂಪನ್ನ :ಬೇರೆಲ್ಲೂ ಕಾಣದ ವಿಶಿಷ್ಠ ಉತ್ಸವ: ಇಳಿದ ಕೊಪ್ಪರಿಗೆ: ದೇವಳದ ಆನೆ ಯಶಸ್ವಿಯನೀರಾಟ.


ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವವು ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿದಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು.
ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿತ್ತು. ಬುಧವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪ್ತಿಯಾಯಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೇವರ ಕೊಪ್ಪರಿಗೆ ಅನ್ನದ ಬೋಜನಪ್ರಸಾದ ಸ್ವೀಕರಿಸಿದರು.

ವಿಶಿಷ್ಠ ಉತ್ಸವ:
ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣಕ್ಕೆ ಬೆಳಗ್ಗಿನಿಂದ ನೀರನ್ನು ಬಿಟ್ಟು ಹೊರಾಂಗಣದ ಸುತ್ತಲೂ ನೀರನ್ನು ತುಂಬಿಸಲಾಯಿತು. ರಾತ್ರಿ ಮಹಾಪೂಜೆಯ ಬಳಿಕ ದೀಪಾರಾಧನೆಯುಕ್ತ ಪಾಲಕಿ ಉತ್ಸವವು ನೀರಿನಲ್ಲಿ ನೆರವೇರಿತು. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಉತ್ಸವವು ಬೇರೆ ಯಾವುದೇ ದೇವಳದಲ್ಲಿ ಕಾಣಸಿಗುವುದಿಲ್ಲ. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು. ಈ ವಿಶಿಷ್ಠ ಉತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಕೃತಾರ್ಥರಾದರು.

ಮಹಾಸಂಪ್ರೋಕ್ಷಣಾ ಹೋಮ:
ಸೋಮವಾರ ಬೆಳಗ್ಗೆ ಸುಮೂಹುರ್ತದಲ್ಲಿ ಕೊಪ್ಪರಿಗೆ ಇಳಿಯಿತು. ಆ ಬಳಿಕ ದೇವಳದಲ್ಲಿ ಮಹಾ ಸಂಪ್ರೋಕ್ಷಣಾ ಹೋಮವು ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈಧಿಕ ವಿದಿವಿದಾನ ನೆರವೇರಿಸಿದರು. ಲಕ್ಷದೀಪೋತ್ಸವದ ದಿನ ೧೬ ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತಿ ಅಂಕರಾರ್ಪಣೆ ನೆರವೇರಿಸಲಾಗಿತ್ತು. ಸೋಮವಾರ ಮಹಾ ಸಂಪ್ರೋಕ್ಷಣೆ ನಡೆದು, ಪ್ರತಿ ದಿನ ಪೂಜಿಸಿದ ಅಂಕುರವನ್ನು ವಿಸರ್ಜಿಸಲಾಯಿತು.

ನೀರಾಡಿದ ಯಶಸ್ವಿ:
ಶ್ರೀ ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿAದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ, ತಾನು ಸಂಭ್ರಮ ಪಡುವುದರೊಂದಿಗೆ, ಭಕ್ತಾಧಿಗಳಿಗೂ ಹೆಚ್ಚಿನ ಸಂತಸವನ್ನು ನೀಡಿತು.ಅಲ್ಲದೆ ನೀರಿನಲ್ಲಿ ಪುಟಾಣಿ ಮಕ್ಕಳು ಒದ್ದೆಯಾಗಿ ಆಟವಾಡುತ್ತಿದ್ದರು.

ನೀರಾಟವಾಡಿದ ಚಿಣ್ಣರು:
ಶ್ರೀ ದೇವಳದ ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಚಿಣ್ಣರು ಪಟ್ಟರು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದವರಿಗೆ ನೀರನ್ನು ಹಾರಿಸಿ ಪುಟಾಣಿಗಳು ಸಂತಸಪಟ್ಟರು. ಮಕ್ಕಳೊಂದಿಗೆ ಹಿರಿಯರು ಕೂಡಾ ನೀರಾಟವಾಡಿ ಸಂಭ್ರಮಿಸಿದರು.
ಈ ಸಂದರ್ಭ ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ಎಇಒ ಪುಷ್ಪಲತಾ ರಾವ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ಮರ್ಧಾಳ, ಚಂದ್ರಶೇಖರ ನಲ್ಲೂರಾಯ,ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯ ಕುಮಾರ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.

ಇಂದಿನಿಂದ ಸರ್ಪಸಂಸ್ಕಾರ ಸೇವೆ ಆರಂಭ:
ಶ್ರೀ ಕ್ಷೇತ್ರದ ಜಾತ್ರೆಯ ಅವಧಿಯಲ್ಲಿ ಶ್ರೀ ದೇವಳದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ನಡೆಯುವುದಿಲ್ಲ. ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಮುಕ್ತಾಯವಾಗಿರುವುದರಿಂದ ಇಂದಿನಿAದ
( ಡಿ.೦೬)ಸರ್ಪಸಂಸ್ಕಾರ ಸೇವೆಯು ಪುನರಾರಂಭಗೊಳ್ಳಲಿದೆ.ಮಂಗಳವಾರದಿಂದ ಸರ್ಪಸಂಸ್ಕಾರ ಸೇವೆಯು ಪುನರಾರಂಭಗೊಳ್ಳಲಿದೆ.
ಡಿ.೨೮ಕಿರುಷಷ್ಠಿ:
ಶ್ರೀ ದೇವಳದಲ್ಲಿ ಕಿರುಷಷ್ಠಿ ರಥೋತ್ಸವವು ಡಿ.೨೮ರಂದು ಸಂಜೆ ನೆರವೇರಲಿದೆ. ಈ ಮೊದಲು ಕಿರುಷಷ್ಠಿ ಅಂಗವಾಗಿ ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ನೀರಿನಲ್ಲಿ ಬಂಡಿ ಉತ್ಸವ ನೆರವೇರುವುದರೊಂದಿಗೆ ಕುಕ್ಕೆ ಜಾತ್ರೆ ಸಮಾಪನ.
ವರದಿ: ಶಿವ ಭಟ್ ಸುಬ್ರಹ್ಮಣ್ಯ