ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಶಮೈಲಾರಂ ಇಸ್ನಾಪುರ್‌ನಲ್ಲಿ ಇರುವ ಸಿಗಾಚಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಫಾರ್ಮಾ ಘಟಕದಲ್ಲಿ ಜೂನ್ 30ರಂದು ಬೆಳಿಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 36 ಕಾರ್ಮಿಕರು ದುರ್ಮರಣಕ್ಕೆ ಒಳಗಾಗಿದ್ದು, ಇನ್ನಷ್ಟು ಶವಗಳು ಪತ್ತೆಯಾಗುವ ಸಾಧ್ಯತೆ ಇದ್ದು ರಕ್ಷಣಾ ಕಾರ್ಯಚಟುವಟಿಕೆಗಳು ಮುಂದುವರಿದಿವೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ₹1 ಕೋಟಿ ಹಾಗೂ ಗಂಭೀರ ಗಾಯಾಳುಗಳಿಗೆ ₹10 ಲಕ್ಷ ಪರಿಹಾರ ನೀಡಲು ಆದೇಶ ನೀಡಿದ್ದಾರೆ. ತಾತ್ಕಾಲಿಕ ಪರಿಹಾರದವಾಗಿ ಮೃತರ ಕುಟುಂಬಗಳಿಗೆ ₹1 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ನೀಡಲಾಗಿದೆ.
ಆರೋಗ್ಯ ಸಚಿವ ಡಾ. ಸಿ. ದಾಮೋದರ್ ರಾಜಾ ನರ್ಸಿಂಹ, ಕಾರ್ಮಿಕ ಸಚಿವ ವಿವೇಕ್ ವೆಂಕಟಸ್ವಾಮಿ, ಕೈಗಾರಿಕಾ ಸಚಿವ ಡಿ. ಶ್ರೀಧರ್ ಬಾಬು ಹಾಗೂ ರಾಜಸ್ವ ಸಚಿವ ಪೊಂಗುಲೆಟಿ ಶ್ರೀನಿವಾಸ್ ರೆಡ್ಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಆಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸೇರಿದ ವಿಶೇಷ ಫಾರೆನ್ಸಿಕ್ ತಂಡವನ್ನು ಮರಣೋತ್ತರ ಪರೀಕ್ಷೆ ಹಾಗೂ ಡಿಎನ್ಎ ಮಾದರಿಗಳ ಸಂಗ್ರಹಕ್ಕಾಗಿ ನಿಯೋಜಿಸಲಾಗಿದೆ. ಈಗಾಗಲೇ 15 ಶವಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ನಾಲ್ವರನ್ನು ಮಾತ್ರ ಗುರುತಿಸಲಾಗಿದೆ.

