ಕೋಲ್ಕತ್ತಾ: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ನೂತನ ಸರ್ಕಾರ ಭಾರಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಗಡಿ ಪ್ರದೇಶಗಳಲ್ಲಿ ಬಿಎಸ್ಎಫ್ (ಗಡಿ ಭದ್ರತಾ ಪಡೆ) ಹೊರಠಾಣೆಗಳು (Outposts) ಮತ್ತು ಮುಳ್ಳುತಂತಿ ಬೇಲಿ ಮೂಲಸೌಕರ್ಯಗಳನ್ನು ನಿರ್ಮಿಸಲು ರಾಜ್ಯ ಸರ್ಕಾರವು ಒಟ್ಟು 142.79 ಎಕರೆ ಭೂಮಿಯನ್ನು ಬಿಎಸ್ಎಫ್ಗೆ ಅಧಿಕೃತವಾಗಿ ಹಸ್ತಾಂತರಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಮೇ 11 ರಂದು ನಡೆದ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಗಡಿ ಬೇಲಿ ನಿರ್ಮಾಣ ಯೋಜನೆಗಾಗಿ 45 ದಿನಗಳ ಒಳಗೆ ಒಟ್ಟು 600 ಎಕರೆ ಭೂಮಿಯನ್ನು ಹಸ್ತಾಂತರಿಸಲು ನಿರ್ಣಾಯಕ ತೀರ್ಮಾನ ಕೈಗೊಂಡಿತ್ತು. ಈ ಮಹತ್ವಾಕಾಂಕ್ಷಿ ನಿರ್ಧಾರದ ಮೊದಲ ಭಾಗವಾಗಿ ಇದೀಗ 142.79 ಎಕರೆ ಜಮೀನನ್ನು ಬಿಎಸ್ಎಫ್ ವಶಕ್ಕೆ ನೀಡಲಾಗಿದೆ.
ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡ ಸಿಎಂ ಸುವೇಂದು ಅಧಿಕಾರಿ ಬುಧವಾರ ತಡರಾತ್ರಿ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಪ್ರಮುಖ ಬೆಳವಣಿಗೆಯನ್ನು ಹಂಚಿಕೊಂಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ,”ಗಡಿ ಪ್ರದೇಶಗಳಲ್ಲಿ ಬಿಎಸ್ಎಫ್ ಔಟ್ಪೋಸ್ಟ್ಗಳು ಮತ್ತು ಮುಳ್ಳುತಂತಿ ಬೇಲಿಗಳ ನಿರ್ಮಾಣಕ್ಕೆ ಸಕಲ ಸೌಕರ್ಯಗಳನ್ನು ಒದಗಿಸುವ ಮೂಲಕ ಗಡಿ ಭದ್ರತೆಯನ್ನು ಬಲಪಡಿಸಲು ಪಶ್ಚಿಮ ಬಂಗಾಳ ಸರ್ಕಾರವು ತೀವ್ರಗತಿಯ ಕ್ರಮಗಳನ್ನು ಕೈಗೊಂಡಿದೆ. ಗಡಿ ಭಾಗದ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಲು ಹೆಚ್ಚುವರಿ ಭೂಮಿಯನ್ನು ಬಿಎಸ್ಎಫ್ಗೆ ಹಸ್ತಾಂತರಿಸಲಾಗಿದ್ದು, ಈವರೆಗೆ ವರ್ಗಾವಣೆ ಮಾಡಲಾದ ಒಟ್ಟು ಭೂಮಿಯ ಪ್ರಮಾಣ 142.79 ಎಕರೆಗೆ ತಲುಪಿದೆ” ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ರಾಜ್ಯದ 9 ಗಡಿ ಜಿಲ್ಲೆಗಳಲ್ಲಿ ಬಿಎಸ್ಎಫ್ಗೆ ಹಸ್ತಾಂತರಿಸಲಾದ ಜಮೀನಿನ ವಿವರವಾದ ಜಿಲ್ಲಾವಾರು ಪಟ್ಟಿಯನ್ನೂ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯ ಮೊದಲ ಹಂತವಾಗಿ ಮೇ 20 ರಂದೇ ಸರ್ಕಾರದಿಂದ ಖರೀದಿಸಲಾದ 43 ಎಕರೆ ಭೂಮಿ ಮತ್ತು 31.9 ಎಕರೆ ಸರ್ಕಾರಿ ಭೂಮಿಯ ಮಂಜೂರಾತಿ ಆದೇಶಗಳನ್ನು ಬಿಎಸ್ಎಫ್ಗೆ ನೀಡಲಾಗಿತ್ತು.
