​ಬಿ.ಸಿ. ರೋಡ್‌ನಲ್ಲಿ ಭೀಕರ ಘಟನೆ: ಬಸ್ ನಿಲ್ದಾಣದಲ್ಲೇ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ!

​ಬಿ.ಸಿ. ರೋಡ್‌ನಲ್ಲಿ ಭೀಕರ ಘಟನೆ: ಬಸ್ ನಿಲ್ದಾಣದಲ್ಲೇ ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಕಿರಾತಕ!

​ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‌ನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಸಾರ್ವಜನಿಕರ ಕಣ್ಣೆದುರೇ ಯುವತಿಯೊಬ್ಬಳನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

​ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿ ಲಾವಣ್ಯ (20) ಎಂದು ಗುರುತಿಸಲಾಗಿದೆ. ಈಕೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಕ್ಕೆಪದವು ಮೂಲದ, ಲಾವಣ್ಯಳ ದೂರದ ಸಂಬಂಧಿ ಚೇತನ್ ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.

ಏಕಪಕ್ಷೀಯ ಪ್ರೇಮದ ಹಿನ್ನೆಲೆ?​ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಚೇತನನಿಗೆ ಲಾವಣ್ಯ ಮೇಲೆ ಏಕಪಕ್ಷೀಯ ಪ್ರೇಮವಿತ್ತು. ಆದರೆ ಲಾವಣ್ಯ ಈತನ ಪ್ರೀತಿಯನ್ನು ತಿರಸ್ಕರಿಸಿದ್ದಳು ಎನ್ನಲಾಗಿದೆ. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಚೇತನ್, ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ.

ಬಸ್‌ನಿಂದ ಇಳಿಯುತ್ತಿದ್ದಂತೆ ದಾಳಿ​! ಗುರುವಾರ ಸಂಜೆ ಲಾವಣ್ಯ ಕಕ್ಕೆಪದವುಗೆ ತೆರಳುವ ಕೆಎಸ್ಆರ್‌ಟಿಸಿ ಬಸ್ ಹತ್ತಿದ್ದಳು. ಇದನ್ನು ಗಮನಿಸಿದ ಆರೋಪಿ ಚೇತನ್ ಕೂಡ ಆಕೆಯನ್ನು ಹಿಂಬಾಲಿಸಿದ್ದಾನೆ. ಲಾವಣ್ಯ ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆ, ಚೇತನ್ ಕೂಡ ಆಕೆಯ ಬೆನ್ನ ಹಿಂದೆ ಇಳಿದು ತಾನು ತಂದಿದ್ದ ಮಚ್ಚಿನಿಂದ ಆಕೆಯ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಮನಸೋಇಚ್ಛೆ ಕೊಚ್ಚಿದ್ದಾನೆ.

ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ರಕ್ತದ ಮಡುವಿನಲ್ಲಿ ಬಿದ್ದ ಲಾವಣ್ಯಳನ್ನು ಬಿಟ್ಟು, ಆರೋಪಿ ಚೇತನ್ ಮಾರಕಾಸ್ತ್ರವನ್ನು ಸ್ಥಳದಲ್ಲೇ ಎಸೆದು ಓಡಿಹೋಗಿದ್ದಾನೆ. ಆರೋಪಿ ಹಲ್ಲೆ ನಡೆಸಿ ಪರಾರಿಯಾಗುವ ದೃಶ್ಯಗಳು ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು​ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯಳನ್ನು ಸ್ಥಳೀಯರು ತಕ್ಷಣವೇ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು. ಆದರೆ ಆಕೆ ತೀವ್ರ ರಕ್ತಸ್ರಾವದಿಂದಾಗಿ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಆರೋಪಿ ಪತ್ತೆಗೆ ಜಾಲ ಬೀಸಿದ ಪೊಲೀಸರು. ​ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚೇತನ್ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಅಪರಾಧ ಪ್ರಾದೇಶಿಕ ರಾಜ್ಯ