
ಕಡಬ: ಕೊಂಬಾರಿನ ಕೆಂಜಾಳ ಬಗ್ಪುಣಿ ಭಾಗದ ಹೊಳೆಯ ನೀರಿನಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದ ಕಾಡಾನೆ ಮೃತಪಟ್ಟಿದೆ.


ನಿಶ್ಶಕ್ತಿಯಿಂದಾಗಿ ಮೇಲೆ ಬರಲು ಸಾಧ್ಯವಾಗದೇ ಹೊಳೆಯಲ್ಲಿಯೇ ನಿಂತಿದ್ದ ಆನೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಡಬದ ಪಶು ವೈದ್ಯಾಧಿಕಾರಿ ಡಾ| ಅಜಿತ್ ಹಾಗೂ ಹುಣಸೂರಿನಿಂದ ಅರಣ್ಯ ಇಲಾಖೆಯ ಪಶು ವೈದ್ಯ ಡಾ| ಮುಜೀಬ್ ಅವರನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಆದ್ರೆ ಆನೆಯನ್ನು ಪರಿಶೀಲಿಸಿದ ಅವರು ಅದಕ್ಕೆ ಸುಮಾರು 50 ವರ್ಷ ಪ್ರಾಯವಾಗಿದ್ದು, ಬಾಯಿಯಲ್ಲಿ ಗಾಯವಾಗಿರುವಂತಿದೆ. ವಯಸ್ಸು ಮತ್ತು ಅನಾರೋಗ್ಯದ ಕಾರಣ ಅದಕ್ಕೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಚಿಕಿತ್ಸೆ ನೀಡಬೇಕಾದರೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸಬೇಕಿದೆ. ಆದರೆ ಅದು ಅರಿವಳಿಕೆಯನ್ನು ತಡೆದುಕೊಳ್ಳಲು ಸಾಧ್ಯವಾಗದಷ್ಟು ನಿಶ್ಶಕ್ತವಾಗಿರುವುದರಿಂದಾಗಿ ಅರಿವಳಿಕೆ ಪ್ರಯೋಗ ಸಾಧ್ಯವಿಲ್ಲ. ಒಂದು ವೇಳೆ ಈ ಸ್ಥಿತಿಯಲ್ಲಿ ಅರಿವಳಿಕೆ ಪ್ರಯೋಗಿಸಿದರೆ ಅದರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು.
ಆನೆ ಸಂಜೆಯ ವೇಳೆಗೆ ಕಷ್ಟುಪಟ್ಟು ಹೊಳೆಯಿಂದ ಮೇಲಕ್ಕೆ ಬಂದು ಅರಣ್ಯದೊಳಕ್ಕೆ ಹೋಗಿದ್ದು, ಆದರೆ ಶುಕ್ರವಾರ ಬೆಳಗ್ಗೆ ಬಗ್ಪುಣಿಯಲ್ಲಿ ಆನೆ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.