ವಾಹನ ಸವಾರರಿಗೆ ಕಗ್ಗಂಟ್ಟಾಗಿ ಪರಿಣಮಿಸಿದ ಕಲ್ಲಡ್ಕ ರೋಡ್ ನ ಸ್ಥಿತಿ: ರಸ್ತೆಯಲ್ಲಿ ನಿಂತ ನೆರೆ ನೀರು ದ್ವಿಚಕ್ರ ಪ್ರಯಾಣ ಇನ್ನಷ್ಟು ದುಸ್ತರ


ಬಂಟ್ವಾಳ: ಕಲ್ಲಡ್ಕ ಎಂದರೆ ಸದಾ ಸುದ್ದಿಯಲ್ಲಿರುವ ಸಿ.ಟಿ…ಈಗ ಅದೇನಪ್ಪಾ ಸುದ್ದಿ ಅಂತೀರಾ…..ಅದೇ ಮಾಮೂಲಿ ರಸ್ತೆ ಹೋಗಿ ಗದ್ದೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಸಂಚಾರಕ್ಕೆ ಬದಲಿ ತಾತ್ಕಾಲಿಕ ವಾಗಿ ಸರ್ವೀಸ್ ರಸ್ತೆಗೆ ಹಾಕಿದ ಡಾಮರು ಕಿತ್ತುಹೋಗಿದೆ.

ಸಂಚಾರಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ಬಿಸಿರೋಡಿನಿಂದ ಅಡ್ಡಹೊಳೆವರೆಗೆ ಚತುಷ್ಪತ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆ.ಎನ್‌ಆರ್.ಸಿ.ಕಂಪೆನಿ ಗುತ್ತಿಗೆ ವಹಿಸಿಕೊಂಡಿದೆ. ಕಲಡ್ಕದ ನರಿಹರಿ ಪರ್ವತದ ದ್ವಾರದ ಸ್ವಲ್ಲ ಮುಂದೆಯಿಂದ ಕರಿಂಗಾನ ಕ್ರಾಸ್ ಇವೆರಡರ ಮಧ್ಯೆಯಿಂದ ಕುದ್ರೆಬೆಟ್ಟು ವರೆಗೆ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದೆ.

ಪ್ಲೈ ಓವರ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು ಎಂಬ ನಿಟ್ಟಿನಲ್ಲಿ ಎರಡು ಬದಿಯಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣ ಮಾಡಲಾಗಿದೆ. ಪ್ಲೈ ಓವರ್ ಕಾಮಗಾರಿಯ ಸಂದರ್ಭ ಸರಯಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಅಸಾಧ್ಯ ಎಂಬ ನಿಟ್ಟಿನಲ್ಲಿ ಕಂಪೆನಿ ಸರ್ವೀಸ್ ರಸ್ತೆಗೆ ಕಳಪೆ ಗುಣಮಟ್ಟದ ಡಾಮರುಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಬಾರಿ ಕೂಡ ತಾತ್ಕಾಲಿಕವಾಗಿ ಡಾಮರು ಹಾಕಿದ ಕಂಪೆನಿ ಬಳಿಕ ಮಳೆಗಾಲದಲ್ಲಿ ಉಂಟಾದ ಗುಂಡಿಯನ್ನು ಮುಚ್ಚಲು ಅಸಾಧ್ಯ ಪರಿಸ್ಥಿತಿಯಲ್ಲಿ ಒದ್ದಾಡಿತ್ತು.

ಇದೀಗ ಮತ್ತೆ ಅದೇ ಮಾದರಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮಾಯವಾಗಿ ಗದ್ದೆಯಾಗಿದೆ. ವಾಹನಗಳು ಗುಂಡಿಗೆ ಬಿದ್ದು ಮತ್ತೆ ನೇರವಾಗಿ ಗ್ಯಾರೇಜ್ ಗೆ ಹೋಗಬೇಕು ಎಂಬುದು ವಾಹನಸವಾರರ ಆರೋಪವಾಗಿದೆ.
ಮಳೆಗೆ ಅಸಾಧ್ಯ
ಸರ್ವೀಸ್ ರಸ್ತೆ ನಿರ್ಮಿಸಿದ ಕಂಪೆನಿ ಬಳಿಕ ಸಂಚಾರಕ್ಕೆ ಯೋಗ್ಯವಾದ ರೀತಿಯಲ್ಲಿ ಡಾಮರು ಹಾಕಿಕೊಡಬೇಕಾದ ಜವಾಬ್ದಾರಿ ಕಂಪೆನಿಯದ್ದು, ಆದರೆ ಇಲ್ಲಿ ಕಳೆದ ಎರಡು ವರ್ಷಗಳಿಂದ ವಾಹನಸವಾರರ ಪಾಡು ನಾಯಿ ಪಾಡಾಗಿದೆ,ಕಂಪೆನಿ ಬಗ್ಗೆ ಹೇಳುವರಿಲ್ಲ ಕೇಳುವರಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಕಾಮಗಾರಿ ನಡೆಯುವ ವೇಳೆ ತಾಳ್ಮೆ ಅಗತ್ಯವಾಗಿ ಬೇಕಾಗಿದೆ. ಎಲ್ಲಾ ಕಾಮಗಾರಿ ಮುಗಿದ ಬಳಿಕ ಉತ್ತಮ ರಸ್ತೆ ಸುಗಮ ಸಂಚಾರಕ್ಕೆ ಅನುಕೂಲ ವಾಗಬಹುದು. ಆದರೆ ಇದೇ ರೀತಿ ಕಾರ್ಕಳದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಮತ್ತು ಇಲ್ಲಿ ಸ್ಥಿತಿ ಹೇಗಿದೆ ಎಂಬುದರ ತುಲನೆ ಮಾಡಬೇಕಾಗಿದೆ. ಕಾರ್ಕಳದ ರಸ್ತೆ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ಡಾಮರು ಹಾಕಿ ಸುಸಜ್ಜಿತ ಸರ್ವೀಸ್ ರಸ್ತೆ ನಿರ್ಮಾಣವನ್ನು ಕಂಪೆನಿ ಮಾಡಿದೆ.
ಆದರೆ ಕಳೆದ ಮಳೆಗಾಲದಲ್ಲಿ ಕಲ್ಲಡ್ಕ ರೋಡ್ ನ ಸ್ಥಿತಿ ಹೇಗಿತ್ತು ಎಂದು ಕಂಪೆನಿ ತಿಳಿದುಕೊಂಡಿದೆ.ಇಲ್ಲಿನ ಮಳೆಯ ತೀವ್ರತೆ ಏನು ಎಂಬುದನ್ನು ಅರಿತುಕೊಂಡಿದೆ. ಆದರೂ ಕಂಪೆನಿ ಸರ್ವೀಸ್ ರಸ್ತೆಯನ್ನು ಸರಿಮಾಡುವ ಗೋಜಿಗೆ ಹೋಗಿಲ್ಲ…ಅರ್ಥ ಇಷ್ಟೇ ಇಲ್ಲಿಯ ಜನರು ರಸ್ತೆ ಹೇಗಿದ್ದರೂ ಎದ್ದು ಬಿದ್ದು ಹೋಗುತ್ತಾರೆ, ಇಲ್ಲಿಯ ಸ್ಥಳೀಯ ಅಯಾಯ ಭಾಗದ ಜನಪ್ರತಿನಿಧಿಗಳನ್ನು,ಕೆಲವು ಹೋರಾಟದ ಮುಖವಾಡ ಹೊಂದಿರುವರನ್ನು ನೋಡಿಕೊಂಡರೆ ಸಾಕು ಎಂಬ ಸತ್ಯ ವಿಚಾರ ಅವರಿಗೆ ತಿಳಿದಿದೆ. ಹಾಗಾಗಿ ಜನರು ಹೈರಾಣಾಗಿದ್ದಾರೆ. ರಸ್ತೆ ವಿಚಾರದಲ್ಲಿ ಯಾರೂ ಮಾತನಾಡುವುದಿಲ್ಲ..
ಪ್ರಸ್ತುತ ಮಾತನಾಡಿದರೆ ಮಳೆ ಕಡಿಮೆಯಾಗುವವರೆಗೆ ಕಾಮಗಾರಿ ಅಸಾಧ್ಯ ಎಂಬ ಮಾತು ಕೇಳಿ ಬರುತ್ತದೆ. ಅದು ಪ್ರತಿ ವರ್ಷದ ಹೇಳಿಕೆ. ಮಳೆ ಬರುವಾಗ ಕೆಲಸ ಮಾಡುವುದು ಅಸಾಧ್ಯ ವೆಂದು ತಿಳಿದಿರುವ ಕಂಪೆನಿಗೆ ಮಳೆಗಾಲ ಆರಂಭವಾಗುವ ಮುನ್ನವೇ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿದಿಲ್ಲವೇ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ.
ಪಾಣೆಮಂಗಳೂರಿನಲ್ಲಿ ಕೃತಕ ನೆರೆ
ಪಾಣೆಮಂಗಳೂರು ಕಲ್ಲರ್ಟಿ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಗಾತ್ರದ ಹೊಂಡ ಬಿದ್ದರೆ,ಅದರ ಎದುರು ಕಡೆ ಅಂಡರ್ ಪಾಸ್ ನ ಕೆಳಭಾಗದಲ್ಲಿ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಈಜುಕೊಳದಂತಿದೆ. ಜನರು ನಡೆದಾಡಲು ಅಸಾಧ್ಯವೆಂದು ಇಲ್ಲಿನ ರಿಕ್ಷಾ ಚಾಲಕರು ದೂರಿದ್ದಾರೆ. ಕಾಮಗಾರಿ ನಡೆಸುವ ಕಂಪೆನಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ? ಹೊರತು ಜನರಿಗೆ ತೊಂದರೆಕೊಡುವ ಮುಟ್ಟಿನಲ್ಲಿ ಇರಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.