ಯೆಮನ್‌ನಲ್ಲಿ ಗಲ್ಲು ಶಿಕ್ಷೆಗೆ ನಿಯೋಜಿಸಲಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ನಿರ್ಧಾರದಿಂದಾಗಿ ಅವರ ಕುಟುಂಬ ಹಾಗೂ ಭಾರತೀಯ ಅಧಿಕಾರಿಗಳಿಗೆ ತಾತ್ಕಾಲಿಕ ನಿರಾಳತೆ ಒದಗಿದರೂ, 2017 ರಲ್ಲಿ ಹತ್ಯೆಗೊಳಗಾದ ಯೆಮೆನ್ ನಾಗರಿಕ ತಲಾಲ್ ಅಬ್ದೊ ಮಹ್ದಿ ಅವರ ಸಹೋದರ ಅಬ್ದೆಲ್ಫತ್ತಾ ಮಹ್ದಿ ಅವರು ಬುದ್ಧವಾರ ಪ್ರಕಟಿಸಿದ ಫೇಸ್‌ಬುಕ್ ಸಂದೇಶದಲ್ಲಿ ತಮ್ಮ ಕುಟುಂಬ ಯಾವುದೇ ರೀತಿಯ ಕ್ಷಮಾದಾನ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಇಸ್ಲಾಮಿಕ್ ಕಾನೂನಿನ ಪ್ರಕಾರ, ಪೀಡಿತನ ಕುಟುಂಬವು ದಿಯತ್ ಎಂಬ ಹಣಕಾಸು ಪರಿಹಾರವನ್ನು ಒಪ್ಪಿಕೊಳ್ಳುವ ಮೂಲಕ ಅಪರಾಧಿಯನ್ನು ಗಲ್ಲು ಶಿಕ್ಷೆಯಿಂದ ತಪ್ಪಿಸಬಹುದಾಗಿದೆ. ಆದರೆ ಮಹ್ದಿ ಕುಟುಂಬ ಈ ಅವಕಾಶವನ್ನು ಸಂಪೂರ್ಣವಾಗಿ ನಿರಾಕರಿಸಿದೆ. “ವಿಳಂಬದಿಂದ ಏನೂ ಸಾಧಿಸಲಾರದು, ಒತ್ತಡಗಳಿಂದ ನಮ್ಮ ನಿಲುವು ಬದಲಾಗದು. ರಕ್ತವನ್ನು ಹಣದಿಂದ ಖರೀದಿಸಲಾಗದು, ಸತ್ಯ ಮರೆತುಹೋಗಿಲ್ಲ. ಪ್ರತೀಕಾರ ಅವಶ್ಯಕ, ಅದು ಸಂಭವಿಸದೇ ಇರದು,” ಎಂದು ಅಬ್ದೆಲ್ಫತ್ತಾ ಮಹ್ದಿ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಿಮಿಷಾ ಪ್ರಿಯಾ, ಕೇರಳದ ಪಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದವರು. ಅವರು 2008 ರಲ್ಲಿ, 19 ವರ್ಷದ ವಯಸ್ಸಿನಲ್ಲಿ ಯೆಮನ್‌ಗೆ ನರ್ಸ್ ಉದ್ಯೋಗಕ್ಕಾಗಿ ತೆರಳಿದ್ದರು. ನಂತರ, ತಲಾಲ್ ಎಂಬ ವ್ಯಕ್ತಿಯೊಂದಿಗೆ ಕ್ಲಿನಿಕ್ ನಡೆಸುತ್ತಿದ್ದ ಸಂದರ್ಭದಲ್ಲಿರುವ ವೈಯಕ್ತಿಕ ಮತ್ತು ವಾಣಿಜ್ಯ ವ್ಯತ್ಯಾಸಗಳ ಹಿನ್ನೆಲೆಯಲ್ಲಿ, ತಲಾಲ್ ಅವರಿಗೆ ಸೆಡೇಟಿವ್ ಇಂಜೆಕ್ಷನ್ ನೀಡಿದ ಪರಿಣಾಮವಾಗಿ ಅವರು ಸಾವನ್ನಪ್ಪಿದರು ಎಂಬ ಆರೋಪದ ಮೇರೆಗೆ 2020 ರಲ್ಲಿ ಯೆಮೆನಿನ ಸ್ಥಳೀಯ ನ್ಯಾಯಾಲಯ ನಿಮಿಷಾ ಅವರನ್ನು ಅಪರಾಧಿಯಾಗಿ ಘೋಷಿಸಿತು.
ಈ ನಡುವೆಯೇ, ಭಾರತದಿಂದ ಇಸ್ಲಾಮಿಕ್ ಧರ್ಮದ ನೆಲೆಯಲ್ಲಿಯ ಸಂಧಾನದ ಪ್ರಯತ್ನಗಳು ನಡೆಯುತ್ತಿವೆ. ಭಾರತದಲ್ಲಿನ ಗ್ರ್ಯಾಂಡ್ ಮುಫ್ತಿ ಹಾಗೂ ಕೇರಳದ ಪ್ರಮುಖ ಸುನ್ನಿ ಧಾರ್ಮಿಕ ನಾಯಕ ಎ.ಪಿ. ಅಬೂಬಕ್ಕರ್ ಮುಸಲಿಯಾರ್ ಅವರು ಯೆಮೆನಿನ ಖ್ಯಾತ ಧಾರ್ಮಿಕ ನಾಯಕ ಶೇಖ್ ಹಬೀಬ್ ಉಮರ್ ಬಿನ್ ಹಫೀಜ್ ಅವರನ್ನು ಸಂಪರ್ಕಿಸಿ, ತಲಾಲ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಲು ಯತ್ನಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ‘ಸೆವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್’ನ ಸದಸ್ಯ ಅಡ್ವೊಕೇಟ್ ಕೆ.ಆರ್. ಸುಭಾಷ್ ಚಂದ್ರನ್ ಅವರು, “ನಿಮಿಷಾ ಅವರಿಗೆ ಕ್ಷಮಾದಾನ ದೊರೆಯಬೇಕಾದರೆ, ತಲಾಲ್ ಅವರ ಕುಟುಂಬದ ಎಲ್ಲಾ ಸದಸ್ಯರ ಸಹಮತ ಅಗತ್ಯವಿದೆ. ಒಬ್ಬರೂ ವಿರೋಧಿಸಿದರೆ ದಿಯತ್ ವಿಫಲವಾಗುತ್ತದೆ. ನಾವು ಕುಟುಂಬದ ನೋವನ್ನು ಅರ್ಥಮಾಡಿಕೊಂಡಿದ್ದು, ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಸಂಧಾನದ ಎಲ್ಲ ಪ್ರಯತ್ನಗಳಲ್ಲಿ ನಾವು ನಿರಂತರವಾಗಿ ಸಹಕರಿಸುತ್ತಿದ್ದೇವೆ,” ಎಂದು ಹೇಳಿದ್ದಾರೆ.
ಗಲ್ಲು ಶಿಕ್ಷೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದರೂ, ತಲಾಲ್ ಅವರ ಕುಟುಂಬದಿಂದ ಬಂದಿರುವ ಗಟ್ಟಿಯಾದ ನಿರಾಕರಣೆ ಈ ಪ್ರಕರಣದ ಭವಿಷ್ಯವನ್ನು ಮತ್ತಷ್ಟು ಗಂಭೀರಗೊಳಿಸಿದೆ. ನಿಮಿಷಾ ಪ್ರಿಯಾ ಅವರ ಬದುಕು ಉಳಿಯುವುದೆಂಬ ಪ್ರಶ್ನೆಗೆ ಉತ್ತರ, ಮುಂದಿನ ಸಂಧಾನದ ಪ್ರಯತ್ನಗಳ ಯಶಸ್ಸಿನ ಮೇಲೆ ಅವಲಂಬಿತವಾಗಿದೆ.