ಜುಲೈ 23; ಸುಳ್ಯ ನಗರದ ಜಟ್ಟಿಪಳ್ಳ ಎಂಬಲ್ಲಿ ರೇವತಿ ನಾಯ್ಕ್ ಎಂಬವರ ಮನೆಗೆ ಹೊಸ ಮಣ್ಣು ತುಂಬಿಸಿದ ರಸ್ತೆ ಆವರಣ ಗೋಡೆ ಸಮೇತ ಮಗುಚಿ ಬಿದ್ದು ಶೌಚಾಲಯ ಮತ್ತು ಮೇಲ್ಛಾವಣಿಗೆ ಹಾನಿ ಸಂಭವಿಸಿದೆ.
ಇಂದು ಸುರಿದ ಭಾರಿ ಮಳೆಗೆ ಮನೆಯ ಹಿಂಬಾಗದ ರಸ್ತೆಯಲ್ಲಿ ಚರಂಡಿ ಮುಚ್ಚಿ ರಸ್ತೆ ನಿರ್ಮಿಸಿದ್ದು ಮತ್ತು ಸಮೀಪದ ಮಸೀದಿ ಕಟ್ಟಡವನ್ನು ಸೂಕ್ತ ಮುಂಜಾಗ್ರತೆ ಇಲ್ಲದೆ ವಿಸ್ತರಿಸಿದ ಕಾರಣ ನೀರು ಹರಿದು ಹೋಗದೆ ನಿಂತು ಮನೆಯ ಆವರಣ ಗೋಡೆ ಕುಸಿದಿರುವ ಘಟನೆ ಸಂಭವಿಸಿದೆ. ಘಟನೆಯ ಸಂದರ್ಭ ಸ್ಥಳದಲ್ಲಿ ಯಾರು ಇಲ್ಲದೇ ಇದ್ದುದರಿಂದ ಪ್ರಾಣಹಾನಿ ಸಂಭವಿಸಿಲ್ಲ.

ತೀವ್ರ ಮಳೆಗೆ ಆವರಣ ಗೋಡೆ ಕುಸಿತ ಇನ್ನೂ ವಿಸ್ತರಿಸುವಂತಿದ್ದು ಮನೆಗೂ ಹಾನಿಯಾಗುವ ಸಂಭವವಿದೆ.
ಸ್ಥಳಕ್ಕೆ ಸುಳ್ಯ ನಗರ ಪಂಚಾಯತ್ ಸದಸ್ಯೆ ಸರೋಜಿನಿ ಪೆಲ್ತಡ್ಕ, ಗ್ರಾಮ ಲೆಕ್ಕಿಗ ತಿಪ್ಪೇಸ್ವಾಮಿ ಹಾಗೂ ಸ್ಥಳೀಯ ಹಲವರು ಭೇಟಿ ನೀಡಿದ್ದು ನೀರು ಮನೆಯೊಳಗೆ ನುಗ್ಗದಂತೆ ತಾತ್ಕಾಲಿಕ ಚರಂಡಿ ನಿರ್ಮಿಸಲಾಗಿದೆ.

ನಾಳೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ಆಗಮಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.