
ಬೆಂಗಳೂರು ಮೇ 01: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಬಿಪಿಎಲ್ ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.
ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‍ಗಳಲ್ಲಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪಿಸುತ್ತೇವೆ.
ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆಜಿ ಶ್ರೀ ಅನ್ನ- ಸಿರಿ ಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.