ನಾಳೆ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ: ಕಡ್ಡಾಯ ಸೇವೆಗೆ ನಿಗಮ ಸೂಚನೆ.

ನಾಳೆ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ: ಕಡ್ಡಾಯ ಸೇವೆಗೆ ನಿಗಮ ಸೂಚನೆ.

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು ಸಂಘಟನೆಗಳು ಸೆ.29 ರಂದು ‘ಕರ್ನಾಟಕ ಬಂದ್‌’ಗೆ ಕರೆ ನೀಡಿವೆ. ಆದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಾರ್ವಜನಿಕರ ಓಡಾಟಕ್ಕಾಗಿ ಬಸ್‌ಗಳ ಸಂಚಾರ ನಡೆಸಲು ನಿರ್ಧರಿಸಿದ್ದು, ನೌಕರರಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದೆ.

“ಸಾರ್ವಜನಿಕರ ಅಗತ್ಯ ಸೇವೆಗಳ ಅಡಿಯಲ್ಲಿ ಸಾರಿಗೆ ನಿಗಮಗಳು ಬರುವುದರಿಂದ ಜನರಿಗೆ ಅಗತ್ಯವಾಗಿ ಸೇವೆ ನೀಡಬೇಕು. ದೀರ್ಘಾವಧಿ, ವಾರದ ರಜೆಗೆ ತೆರಳಿರುವ ನೌಕರರು ಹೊರತುಪಡಿಸಿ ಉಳಿದ ಎಲ್ಲ ನೌಕರರು ಕಡ್ಡಾಯವಾಗಿ ಸೆ.29 ರಂದು ಕರ್ತವ್ಯಕ್ಕೆ ಹಾಜರಾಗಬೇಕು. ಕರ್ತವ್ಯಕ್ಕೆ ಹಾಜರಾಗದೆ, ಬಂದ್‌ನಲ್ಲಿ ಭಾಗಿಯಾದರೆ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಸಾರಿಗೆ ನೌಕರರಿಗೆ ನಿಗಮ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಸೆ.29 ರಂದು ‘ಕರ್ನಾಟಕ ಬಂದ್’ ಇರುವ ಹಿನ್ನೆಲೆ, ಬಿಎಂಟಿಸಿ ಬಸ್‌ಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ನಿಗಮ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಿರಲು ಬಿಎಂಟಿಸಿ ಎಲ್ಲ ಡಿಪೋಗಳಿಗೂ ಪೊಲೀಸ್ ಭದ್ರತೆ ನೀಡುವಂತೆ ಹಾಗೂ ಬಸ್ ನಿಲ್ದಾಣಗಳಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸ್ಥೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

ಡಿಪೋ ಮ್ಯಾನೇಜರ್‌ಗಳು ಕಡ್ಡಾಯವಾಗಿ ಡಿಪೋದಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ಕಾರ್ಯಚರಣೆ ನಡೆಸಬೇಕು. ಬಿಎಂಟಿಸಿ ಬಸ್ ರಸ್ತೆಗಿಳಿದಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.

ಕರ್ನಾಟಕ ಬಂದ್‌ ದಿನ ಕೆಎಸ್​ಆರ್​ಟಿಸಿ ಬಿಎಂಟಿಸಿ, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಬಸ್‌ಗಳು ಸಂಚರಿಸಲಿವೆ

ರಾಜ್ಯ