ರಾಜ್ಯ

ಮಡಿಕೇರಿ : ನಿವೃತ್ತ ಪೊಲೀಸ್ ಅಧಿಕಾರಿ ಮನೆಗೇ ನುಗ್ಗಿದ ಚೋರ : ಮಹಿಳೆ ಮೇಲೆ ಹಲ್ಲೆ

ಮಡಿಕೇರಿ ನ.5 : ನಿವೃತ್ತ ಪೊಲೀಸ್ ಅಧಿಕಾರಿಯ ಮನೆಗೇ ನುಗ್ಗಿದ ಚೋರನೊಬ್ಬ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ ತಾಳಿ ಸರವನ್ನು ಕದ್ದೊಯ್ಯಲು ಯತ್ನಿಸಿದ ಘಟನೆ ಮಡಿಕೇರಿ ನಗರದ ಹೃದಯ ಭಾಗದಲ್ಲಿ ನಡೆದಿದೆ.
ನಗರದ ಐಡಿಬಿಐ ಬ್ಯಾಂಕ್ ಎದುರು ವಾಸವಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ.ಪ್ರಭಾಕರ್ ಅವರ ಮನೆಗೆ ಇಂದು ಸಂಜೆ 6.40 ರ ವೇಳೆಗೆ ಲಗ್ಗೆ ಇಟ್ಟ ಕಳ್ಳ ಪತ್ನಿ ಸಾಕಮ್ಮ ಅವರ ತಲೆಯ ಭಾಗಕ್ಕೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಕುತ್ತಿಗೆಯಲ್ಲಿದ್ದ ತಾಳಿ ಸರವನ್ನು ಕಸಿಯಲು ಯತ್ನಿಸಿದ್ದಾನೆ. ಆದರೆ ಸಾಕಮ್ಮ ಜೋರಾಗಿ ಕಿರುಚಿಕೊಂಡ ಕಾರಣ ಆತ ಬಂದ ದಾರಿಗೆ ಸುಂಕವಿಲ್ಲವೆಂದು ಕಾಲಿಗೆ ಬುದ್ದಿ ಹೇಳಿದ್ದಾನೆ. ಸರ ಸಾಕಮ್ಮ ಅವರ ಕುತ್ತಿಗೆಯಲ್ಲೇ ಉಳಿದಿದೆ. ವಾಯು ವಿಹಾರಕ್ಕೆಂದು ಹೋಗಿದ್ದ ಪತಿ ಪ್ರಭಾಕರ್ ಅವರು ಮನೆಗೆ ಮರಳಿದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರ ಸಹಕಾರದಿಂದ ಸಾಕಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಚೋರ ಮನೆಯ ಹಿಂಬಾಗಿಲಿನಿಂದ ಒಳ ಪ್ರವೇಶಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮನೆಯ ಪಕ್ಕದ ಖಾಸಗಿ ಆಸ್ಪತ್ರೆಯ ಕಟ್ಟಡದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳನ ಚಲನವಲನದ ದೃಶ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಅಧಿಕಾರಿ ಲೋಕೇಶ್, ಸಿಬ್ಬಂದಿಗಳು, ಶ್ವಾನ ದಳ, ಬೆರಳಚ್ಚು ಪತ್ತೆ ದಳ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು

Leave a Response

error: Content is protected !!