- ಜೀವಶಕ್ತಿಗೆ ಓಜಸ್ಸೇ ಮೂಲ, ಅನ್ನ ಪರಬ್ರಹ್ಮನ ಸ್ವರೂಪ
- ಆಹಾರ ಸರ್ವೇಂದ್ರಿಯಗಳಿಗೆ ಆನಂದ ನೀಡುವ ಅಮೃತ
- ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಗೋಕರ್ಣ : ಅನ್ನವು ಆನಂದದ ಪ್ರತೀಕವಾಗಿದ್ದು, ಆಹಾರದ ಮೂಲಭೂತ ಗುಣವೇ ಆನಂದವಾಗಿದೆ. ಯಾವುದೇ ಆಹಾರವನ್ನು ನೆನಪಿಸಿಕೊಂಡರೂ, ನೋಡಿದರೂ, ಸವಿದರೂ ಅದು ಆನಂದವನ್ನೇ ಉಂಟುಮಾಡುತ್ತದೆ. ದೇವರೇ ಆಹಾರದ ರೂಪದಲ್ಲಿ ಬಂದು ಜೀವಿಗಳಿಗೆ ಆನಂದವನ್ನು ಹಂಚುತಿದ್ದು, ಅನ್ನ ಪರಬ್ರಹ್ಮನ ಸ್ವರೂಪವೇ ಆಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 28.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ತಿನ್ನುವ ಎಲ್ಲಾ ಪದಾರ್ಥಗಳೂ ರೂಪ, ಗುಣ, ರುಚಿಯಲ್ಲಿ ವ್ಯತ್ಯಾಸವಿದ್ದರೂ, ಸಿಹಿ, ಹುಳಿ, ಖಾರ ಸಹಿತ ಷಡ್ರಸಗಳಿಂದ ಕೂಡಿದ ಎಲ್ಲಾ ಆಹಾರಗಳೂ ಆನಂದವನ್ನು ಕೊಡುತ್ತವೆ ಎಂಬುದು ಆಹಾರದ ಸಮಾನ ಸ್ವಭಾವವಾಗಿದೆ.ಆಹಾರದಿಂದ ಸರ್ವೇಂದ್ರಿಯಗಳ ಸಂತೋಷ ಸಾಧ್ಯವಿದ್ದು, ಅನ್ನದಂತೆ ಸರ್ವೇಂದ್ರಿಯಗಳಿಗೆ ಆನಂದವನ್ನು ನೀಡುವ ವಸ್ತು ವಿಶ್ವದಲ್ಲಿ ಇನ್ನೊಂದಿಲ್ಲ. ಇದು ದೇವರ ಲಕ್ಷಣವಾಗಿದ್ದು, ಈ ಕಾರಣದಿಂದಲೇ ಅನ್ನವನ್ನು ದೇವರೆಂದು ಗೌರವಿಸುವ ಪರಂಪರೆಯಿದೆ ಎಂದು ಅಭಿಪ್ರಾಯಪಟ್ಟರು.

ಜೀವಿಯ ಆಯುಷ್ಯ, ಶಕ್ತಿ, ವರ್ಣ, ಸ್ಮೃತಿ, ಸತ್ವ, ಓಜಸ್ಸು, ಹಾಗೂ ಶೋಭೆಗೆ ಆಹಾರ ಕಾರಣವಾಗಿದ್ದು, ಹಸಿವು ಹೆಚ್ಚಿದಂತೆ ಬುದ್ಧಿಯ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ; ಸರಿಯಾದ ಆಹಾರದಿಂದ ಬುದ್ಧಿ ಮತ್ತೆ ಚುರುಕಾಗುತ್ತದೆ ಇದು ಆಹಾರದ ಶಕ್ತಿಯಾಗಿದೆ ಎಂದರು.

ನಮ್ಮ ದೇಹದಲ್ಲಿರುವ ಓಜಸ್ಸು ಎಂಬುದು ಆಧುನಿಕ ವಿಜ್ಞಾನ ಇನ್ನೂ ತಲುಪದ ಕ್ಷೇತ್ರವಾಗಿದೆ. ಆದರೆ ಸಾವಿರಾರು ವರ್ಷಗಳ ಹಿಂದ್ದೆಯೇ ಆಯುರ್ವೇದದ ಎಲ್ಲಾ ಆಚಾರ್ಯರೂ ಓಜಸ್ಸಿನ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದ್ದು, ಓಜಸ್ಸು ಎಂಬುದು ದೇಹದಲ್ಲೇ ಇರುವ ಅಮೃತದ್ರವವಾಗಿದ್ದು, ದೇಹದಲ್ಲಿರುವ ರಸ ರಕ್ತಾದಿ ಸಪ್ತಧಾತುಗಳ ಸಾರದಿಂದ ಓಜಸ್ಸು ರೂಪಿತವಾಗುತ್ತದೆ. ಆಹಾರವು ಅಗ್ನಿಯನ್ನು ಕಾಪಾಡುತ್ತದೆ ಹಾಗೂ ಓಜಸ್ಸನ್ನು ವೃದ್ಧಿಗೊಳಿಸುತ್ತದೆ. ಅಗ್ನಿ ಹಾಗೂ ಓಜಸ್ಸು ಎರಡು ಜೀವಕ್ಕೆ ಅತ್ಯಗತ್ಯವಾಗಿದ್ದು, ಸರಿಯಾದ ಆಹಾರ ಮತ್ತು ಜೀವನ ಶೈಲಿಯಿಂದ ಓಜಸ್ಸನ್ನು ರಕ್ಷಿಸಿಕೊಳ್ಳಬಹುದು ಎಂದರು.
ಡಾ. ರಾಜಾರಾಮ ಮಡಿಕೇರಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಅರವಿಂದ ಬಂಗಲಗಲ್ಲು, ಗುರು ಲಕ್ಮನೆ, ಚಂದನ್ ಶಾಸ್ತ್ರಿ ಮಗೇಗಾರು, ಸೌಮ್ಯಾ ಮಧ್ಯಸ್ಥ, ಅಜಿತ ಗುಡ್ಗೆ, ಶ್ರೀಕೃಷ್ಣ ಶಾಸ್ತ್ರಿ, ದಿನೇಶ ಹೆಗಡೆ ಹೊಸಾಕುಳಿ, ಕಿರಣ ಸುಂಗೊಳ್ಳಿಮನೆ, ದಿನಪ್ರಧಾನರಾಗಿ ಗುಣಾಜೆ ರಾಮಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.
ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀರಾಮಚಂದ್ರಾಪುರಮಠಕ್ಕೆ ಶಿಷ್ಯಭಾವದಲ್ಲಿ ಪಾರಂಪರಿಕವಾಗಿ ನಡೆದುಕೊಳ್ಲುತ್ತಿರುವ ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪಾದುಕಾಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗುರುಪೀಠ ಹಾಗೂ ಶಿಷ್ಯರು ಆಗಾಗ ಸೇರುವುದರಿಂದ ಗುರು-ಶಿಷ್ಯ ಭಾವ ವೃದ್ಧಿಯಾಗುತ್ತದೆ. ಗುರುಪರಂಪರೆಯ ಪಾದುಕಾಪೂಜೆಯ ಫಲವಾಗಿ ಮರಾಠ ಸಮಾಜದ ಕಷ್ಟ ನಷ್ಟಗಳು ದೂರವಾಗುವಂತೆ ಪರಂಪರೆಯ ಅನುಗ್ರಹ ಸದಾ ಸಮಾಜದ ಮೇಲಿರಲಿ ಎಂದು ಆಶೀರ್ವದಿಸಿದರು. ಮರಾಠ ಸಮಾಜದ ಜಿಲ್ಲಾ ಅಧ್ಯಕ್ಷ ಮಂಜುನಾಥ ತಿಮ್ಮ ಮರಾಠಿ, ಕುಮಟಾ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಶೇಡಿಗದ್ದೆ, ಲುಮ್ಮಾ ವೆಂಕಟೇಶ ಮರಾಠಿ, ವೆಂಕಟರಮಣ ಶೆಡಿಗದ್ದೆ, ನಾರಾಯಣ ಮರಾಠಿ, ಶಿವರಾಮ ಯಲವಳ್ಳಿ ಸೇರಿದಂತೆ ನೂರಾರು ಮರಾಠ ಸಮಾಜದವರು ಉಪಸ್ಥಿತರಿದ್ದರು.
ಏನಿದು ಓಜಸ್ಸು? : ತಾಯಿಯ ಗರ್ಭದಲ್ಲಿ ಜೀವಿಯ ಬೆಳವಣಿಗೆ ಆರಂಭವಾಗುವಾಗ ಮೊಟ್ಟ ಮೊದಲು ಓಜಸ್ಸಿನಿಂದ ಆ ಬೆಳವಣಿಗೆ ಆರಂಭವಾಗುತ್ತದೆ ಎಂದು ಚರಕ ಮಹರ್ಷಿಗಳು ದಾಖಲಿಸಿದ್ದು, ಓಜಸ್ಸು ಜೀವಿಯ ದೇಹದಲ್ಲಿರುವ ಅಮೃತದ್ರವವಾಗಿದೆ. ನಮ್ಮ ಹೃದಯ ಭಾಗದಲ್ಲಿರುವ ಈ ಓಜಸ್ಸು ಸುಮಾರು ಅರ್ಧ ಬೊಗಸೆ ಪ್ರಮಾಣದಲ್ಲಿ ಇರುತ್ತದೆ. ಜೀವ ಶಕ್ತಿಗೆ ಓಜಸ್ಸೇ ಮೂಲವಾಗಿದ್ದು, ಓಜಸ್ಸಿನ ನಾಶದಿಂದ ದೇಹ ನಾಶವಾಗುತ್ತದೆ. – ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

