ನೇಪಾಳ ಭೀಕರ ಪ್ರವಾಹ: ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ!

ನೇಪಾಳ ಭೀಕರ ಪ್ರವಾಹ: ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ!

ಬೆಂಗಳೂರು(ಆ.9): ನೇಪಾಳದಲ್ಲಿ ಸಂಭವಿಸಿರುವ ಭೀಕರ ಮಿಂಚಿನ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದ್ದು, ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಸಿಲುಕಿರುವ ಕನ್ನಡಿಗರೊಂದಿಗೆ ದೂರವಾಣಿ ಹಾಗೂ ವಿಡಿಯೋ ಕರೆ ಮೂಲಕ ಸ್ವತಃ ಸಂವಹನ ನಡೆಸಿದ ಡಿ.ಕೆ. ಶಿವಕುಮಾರ್ ಅವರು, ಯಾರೂ ಧೈರ್ಯ ಗೆಡಬಾರದು ಎಂದು ಧೈರ್ಯ ತುಂಬಿದ್ದಾರೆ.

ದೆಹಲಿಯಲ್ಲಿ ತಂಗಲು ವಿಶೇಷ ವ್ಯವಸ್ಥೆ ​: ನೇಪಾಳದಿಂದ ರಕ್ಷಿಸಲ್ಪಟ್ಟು ನವದೆಹಲಿಗೆ ಆಗಮಿಸುವ ಕರ್ನಾಟಕದ ಪ್ರತಿಯೊಬ್ಬ ನಿವಾಸಿಗೂ ಸೂಕ್ತ ವಸತಿ ಮತ್ತು ಆಹಾರದ ವ್ಯವಸ್ಥೆ ಕಲ್ಪಿಸುವಂತೆ ದೆಹಲಿಯ ‘ಕರ್ನಾಟಕ ಭವನ’ದ ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ. ದೆಹಲಿಗೆ ಬಂದಿಳಿದ ಬಳಿಕ ಅಲ್ಲಿಂದ ಬೆಂಗಳೂರಿಗೆ ಅಥವಾ ಅವರವರ ತವರು ಜಿಲ್ಲೆಗಳಿಗೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ (CMO) ತಿಳಿಸಿದೆ.

ಕೇಂದ್ರ ಹಾಗೂ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕ : ​ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SEOC) ಮತ್ತು ದೆಹಲಿ ಕರ್ನಾಟಕ ಭವನದ ಅಧಿಕಾರಿಗಳು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ನಿಖರ ಮಾಹಿತಿ ಹಾಗೂ ಅವರ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ರೌಂಡ್-ದಿ-ಕ್ಲಾಕ್ (24/7) ನಡೆಸಲಾಗುತ್ತಿದೆ.

ನೇಪಾಳದಲ್ಲಿ ಭೀಕರ ಪ್ರವಾಹ: ರಕ್ಷಣಾ ಕಾರ್ಯಾಚರಣೆ ಚುರುಕು​ರಸುವಾ ಜಿಲ್ಲೆಯ ಭೋಟೇಕೋಶಿ ನದಿ ಪಾತ್ರದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಸೇತುವೆಗಳು, ರಸ್ತೆಗಳು ಮತ್ತು ಸಂಪರ್ಕ ಸಾಧನಗಳು ಸಂಪೂರ್ಣ ಕಡಿತಗೊಂಡಿವೆ. ನೇಪಾಳ ಸೇನೆ ಹಾಗೂ ಖಾಸಗಿ ಸಂಸ್ಥೆಗಳ 16ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಬಳಸಿ ಇದುವರೆಗೆ 4,400ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜಲವಿದ್ಯುತ್ ಯೋಜನೆಯ ಸುರಂಗಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನೂ ಭಾರತೀಯ ಪಡೆಗಳು ಹಾಗೂ ಸ್ಥಳೀಯ ತಂಡಗಳು ರಕ್ಷಿಸಿವೆ.

ರಾಜ್ಯ