ಕಾವೇರಿ ಜಲ ವಿವಾದ: CWMA ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ – ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಕಾವೇರಿ ಜಲ ವಿವಾದ: CWMA ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ – ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಆ.17) ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂಜೀವ್ ಮೆಹ್ತಾ ಅವರನ್ನೊಳಗೊಂಡ ಪೀಠವು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದ ಪೀಠವು, ಅಷ್ಟರೊಳಗೆ ನೀರು ಹರಿಸಿರುವ ಕುರಿತು ಆಡಳಿತಾತ್ಮಕ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು.

ಮುಂದಿನ ವಿಚಾರಣೆ ಆಗಸ್ಟ್ 24ಕ್ಕೆ ಮುಂದೂಡಿಕೆ​: ವಿಚಾರಣೆ ವೇಳೆ ಪೀಠವು, “ಮುಂದಿನ ಒಂದು ವಾರದ ನಂತರ ಈ ವಿಷಯವನ್ನು ಮತ್ತೆ ಪರಿಶೀಲಿಸಲಾಗುವುದು. ಅಲ್ಲಿಯವರೆಗೆ ಕರ್ನಾಟಕ ಸರ್ಕಾರವು ಸಿಡಬ್ಲ್ಯೂಎಂಎ (CWMA) ನೀಡಿರುವ ಆದೇಶಗಳು ಮತ್ತು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು,” ಎಂದು ಸ್ಪಷ್ಟಪಡಿಸಿತು.

ತಮಿಳುನಾಡು ಸರ್ಕಾರದ ವಾದ​: ತಮಿಳುನಾಡು ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್, “ಕರ್ನಾಟಕ ಸರ್ಕಾರವು ಸಿಡಬ್ಲ್ಯೂಎಂಎ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ತಮಿಳುನಾಡಿನ ರೈತರಿಗೆ ಅಗತ್ಯವಿರುವಷ್ಟು ನೀರು ತಲುಪುತ್ತಿಲ್ಲ,” ಎಂದು ಪೀಠದ ಗಮನಕ್ಕೆ ತಂದರು.

ಕಾವೇರಿ ನೀರು ಹಂಚಿಕೆ ನಿಯಮಗಳ ಪ್ರಕಾರ ಕರ್ನಾಟಕವು ನಿರ್ದಿಷ್ಟ ಪ್ರಮಾಣದ ನೀರನ್ನು ಬಿಡುಗಡೆ ಮಾಡಬೇಕು ಎಂದು ಪ್ರಾಧಿಕಾರ ಸೂಚಿಸಿದ್ದರೂ, ಅದನ್ನು ಜಾರಿಗೆ ತರಲು ವಿಫಲವಾಗಿದೆ ಎಂದು ತಮಿಳುನಾಡು ಕೋರ್ಟ್‌ನಲ್ಲಿ ದೂರಿದೆ.

ಆಗಸ್ಟ್ 24ರಂದು ಕೋರ್ಟ್‌ಗೆ ಸಲ್ಲಿಕೆಯಾಗುವ ನೀರಿನ ಬಿಡುಗಡೆಯ ಪ್ರಸ್ತುತ ಸ್ಥಿತಿಗತಿ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಮುಂದಿನ ಕ್ರಮ ಕೈಗೊಳ್ಳಲಿದೆ.

ರಾಜಕೀಯ ರಾಜ್ಯ ರಾಷ್ಟ್ರೀಯ