- ದೇಹವೆಂಬ ರಾಜ್ಯಕ್ಕೆ ಅಗ್ನಿಯೇ ರಾಜ
- ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ
- ಗೋಮಾಂತಕ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಗೋಕರ್ಣ : ಯಾವುದು ಆಯುರ್ವೇದವೋ ಅದೇ ಯೋಗ, ಯಾವುದು ಯೋಗವೋ ಅದೇ ಧರ್ಮ, ಯಾವುದು ಧರ್ಮವೋ ಅದೇ ಅಧ್ಯಾತ್ಮ. ಆಹಾರಕ್ಕೂ ಅಧ್ಯಾತ್ಮಕ್ಕೂ ನೇರ ಸಂಬಂಧವಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯಿತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ‘ಅನ್ನಂ ಬ್ರಹ್ಮ’ ವಿಷಯದಲ್ಲಿ ಪ್ರವಚನವನ್ನು ಅನುಗ್ರಹಿಸಿ,
ಪಾಶ್ಚಿಮಾತ್ಯ ಪದ್ಧತಿಗಳು ರೋಗ ಬಂದ ಮೇಲೆ ಅದನ್ನು ಹೇಗೆ ಸರಪಡಿಸಬೇಕು ಎಂದು ಚಿಂತಿಸುತ್ತವೆ. ಆದರೆ ನಮ್ಮ ಪ್ರಾಚೀನರು ಆಯುರ್ವೇದಾದಿಗಳ ಮೂಲಕ ರೋಗ ಬರದಂತೆ ಸ್ವಸ್ಥವಾಗಿ ಬದುಕುವ ಜೊತೆಗೆ ಪಾಪವನ್ನೂ ಕಳೆದುಕೊಳ್ಳುವ ದಾರಿಯನ್ನು ಎಂದೋ ಕಂಡುಕೊಂಡಿದ್ದಾರೆ. ಆಯುರ್ವೇದ, ಧರ್ಮಶಾಸ್ತ್ರ ಹಾಗೂ ಯೋಗ ಶಾಸ್ತ್ರ ಎಲ್ಲವೂ ಒಂದನ್ನೇ ಬೋಧಿಸುವುದಾಗಿದ್ದು, ಇವೆಲ್ಲವೂ ಇಹದಲ್ಲೂ ಪರದಲ್ಲೂ ಸುಖವಾಗಿರುವ ದಾರಿಯನ್ನು ತೋರುತ್ತವೆ ಎಂದು ಅಭಿಪ್ರಾಯಪಟ್ಟರು.

ಜೀವಿಗಳ ಪ್ರಕೃತಿಯಲ್ಲಿ ಮಂದ, ತೀಕ್ಷ್ಣ, ವಿಷಮ ಹಾಗೂ ಸಮಾಗ್ನಿ ಎಂಬ ನಾಲ್ಕು ವಿಧವಾದ ಅಗ್ನಿಯಿದ್ದು, ಸಮಾಗ್ನಿಯನ್ನು ಸಾಧಿಸಿಕೊಂಡರೆ ಅದು ಸ್ವಸ್ಥ ಜೀವನಕ್ಕೆ ರಹದಾರಿಯಾಗಿದೆ. ಈ ದಿಶೆಯಲ್ಲಿ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನಾವು ನಮ್ಮ ಅಗ್ನಿಯ ಅವಲೋಕನ ಮಾಡಿಕೊಳ್ಳಬೇಕು ಎಂದು ಆಯುರ್ವೇದ ಸೂಚಿಸಿದೆ. ಜಠರಾಗ್ನಿ ಕೆಟ್ಟರೆ ದೇಹ ಮನಸ್ಸು ಎಲ್ಲವನ್ನೂ ಕೆಡಿಸುತ್ತದೆ. ಹಾಗಾಗಿ ದೇಹವೆಂಬ ರಾಜ್ಯಕ್ಕೆ ಅಗ್ನಿಯೇ ರಾಜ ಎಂದು ಹೇಳಿದರು.
ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ : ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾಸೇವೆ ಸಮರ್ಪಿತವಾಯಿತು. ಈ ಬಾರಿ ಚಾತುರ್ಮಾಸ್ಯದಲ್ಲಿ ಸಮಾಜದ ಹಿತವನ್ನು ಮುಖ್ಯವಾಗಿಸಿಕೊಂಡು ಆಹಾರದ ವಿಚಾರದಲ್ಲಿ ಸರಿ ತಪ್ಪುಗಳನ್ನು ತಿಳಿಸಿಕೊಡುವ ಕಾರ್ಯ ನಡೆಯುತ್ತಿದ್ದು, ಸಮಾಜ ಇದರ ಸದುಪಯೋಗ ಪಡೆದುಕೊಳ್ಳಲಿ. ಹವ್ಯಕ ಮಹಾಸಭೆಯ ಜೊತೆ ಗುರುಪೀಠ ಸದಾ ಇರಲಿದೆ ಎಂದು ಆಶೀರ್ವದಿಸಿದರು.
ಮಹಾಸಭೆಯ ಪರವಾಗಿ ಮಾತನಾಡಿದ ಡಾ.ಗಿರಿಧರ ಕಜೆ, ಮಹಾಸಭೆ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಬೆಳೆದು ಬಂದ ಸಂಸ್ಥೆಯಾಗಿದ್ದು, 83 ವರ್ಷಗಳಿಂದ ಸಮಾಜದ ಹಿತಚಿಂತನೆಯಲ್ಲಿ ತೊಡಗಿಕೊಂಡಿದೆ. ಸಮಾಜದಲ್ಲಿ ನಮ್ಮ ಸಂಸ್ಕಾರವನ್ನು ಜಾಗೃತಗೊಳಿಸುವ ಅನೇಕ ಕಾರ್ಯಕ್ರಮಗಳನ್ನು ಮಹಾಸಭೆ ಹಾಕಿಕೊಂಡಿದ್ದು, ಇವೆಲ್ಲವಕ್ಕೂ ಶ್ರೀಗಳ ಮಾರ್ಗದರ್ಶನವನ್ನು ಪ್ರಾರ್ಥಿಸಿದರು. ಹವ್ಯಕ ಮಹಾಸಭೆಯ ಪರವಾಗಿ ರವಿ ನಾರಾಯಣ ಪಟ್ಟಾಜೆ ದಂಪತಿಗಳು ಗುರುಭಿಕ್ಷಾಸೇವೆ ಸಮರ್ಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಆರ್. ಎಂ. ಹೆಗಡೆ ಬಾಳೆಸರ, ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಸೇರಿದಂತೆ ನಿರ್ದೇಶಕರು, ಸಂಚಾಲಕರು ಉಪಸ್ಥಿತರಿದ್ದರು.
ಗೋಮಾಂತಕ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಕರ್ನಾಟಕ – ಗೋವಾ – ಮಹಾರಾಷ್ಟ್ರಗಳಲ್ಲಿ ವ್ಯಾಪಿಸಿರುವ ಗೋಮಾಂತಕ ಸಮಾಜವು ಹೊಸದಾಗಿ ಶ್ರೀಮಠದ ಶಿಷ್ಯಭಾವದಲ್ಲಿ ಸೇರ್ಪಡೆಯಾಗಿದ್ದು, ನೀವು ಇಲ್ಲಿ ಸಮರ್ಪಿಸುವ ಫಲವು ನಿಮ್ಮ ಭಕ್ತಿಯ ಪ್ರತೀಕವಾದರೆ, ನಾವು ನೀಡುವ ಮಂತ್ರಾಕ್ಷತೆಯು ಗುರುಪೀಠದ ಆಶೀರ್ವಾದವಾಗಿದೆ. ಸಮಾಜದ ನೋವು ನಲಿವುಗಳ ಜೊತೆ ಗುರುಪೀಠ ಸದಾ ಇರಲಿದ್ದು, ನಿಮ್ಮ ಮನೆಭಾಷೆಯಾದ ಕೊಂಕಣಿಯನ್ನು ಕಲಿತು ನಿಮ್ಮೊಂದಿಗೆ ವ್ಯವಹರಿಸುವ ಭಾವ ನಮ್ಮದು ಎಂದು ಶ್ರೀಗಳು ಗೋಮಾಂತಕ ಸಮಾಜವನ್ನು ಆಶೀರ್ವದಿಸಿದರು.
ಗೋಮಾಂತಕ ಸಮಾಜದ ರಮೇಶ್ ನಾಯ್ಕ ಜೋಯಿಡಾ, ಭಾಸ್ಕರ ನಾರ್ವೇಕರ, ದೇವದಾಸ ಶೆಜವಾಡಕರ್, ದಿನಕರ ಅಂಕೋಲೇಕರ, ಗುರುನಾಥ ಕಾಮತ್ ಸೇರಿದಂತೆ ಗೋವಾ – ಕರ್ನಾಟಕ ಭಾಗದ ನೂರಾರು ಗೋಮಾಂತಕ ಸಮಾಜ ಬಂಧುಗಳು ಉಪಸ್ಥಿತರಿದ್ದು, ಸ್ವರ್ಣ ಪಾದುಕಾ ಪೂಜೆಯನ್ನು ಸಮರ್ಪಿಸಿದರು.

