ಸುಳ್ಯ: ಜೇಸಿಐ ಸುಳ್ಯ ಸಿಟಿ ಹಾಗೂ ನಗರದ ವಿವಿಧ ಪ್ರಮುಖ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15, 2026ರ ಶನಿವಾರದಂದು ಸಾಂಪ್ರದಾಯಿಕ ‘ಆಟಿ ಕೂಟ’ ಹಾಗೂ ‘ಆಟಿ ಗಮ್ಮತ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಭ್ರಮದ ಕೂಟವು ಅಂಬಟೆಡ್ಕದ ವರ್ತಕರ ಸಮುದಾಯ ಭವನದಲ್ಲಿ ಪೂರ್ವಾಹ್ನ 11.00 ಗಂಟೆಗೆ ಚಾಲನೆಗೊಳ್ಳಲಿದೆ.

ಈ ಕಾರ್ಯಕ್ರಮವನ್ನು ಜೇಸಿಐ ಸುಳ್ಯ ಸಿಟಿ ಸಂಸ್ಥೆಯೊಂದಿಗೆ ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸಿಟ್ಯೂಟ್ ಸುಳ್ಯ, ಗ್ಲೋಬಲ್ ಕಂಪ್ಯೂಟರ್ & ಟೈಪ್ರೈಟಿಂಗ್ ಶಿಕ್ಷಣ ಸಂಸ್ಥೆ ಹಾಗೂ ಕಲರ್ ಗಾರ್ಮೆಂಟ್ಸ್ ಹೊಲಿಗೆ ತರಬೇತಿ ಕೇಂದ್ರ ಸುಳ್ಯ ಇವುಗಳ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದಿಂದ ಈ ಸೌಹಾರ್ದ ಕೂಟವನ್ನು ಸಂಘಟಿಸಲಾಗಿದೆ.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷರಾದ JFM ನಾಗವೇಣಿ ದಾಮೋದರ ಕೋರಡ್ಕ ವಹಿಸಲಿದ್ದಾರೆ. ಸಂಘಟನೆಯ ಪೂರ್ವಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ವಿವಿಧ ಸಂಘಟನಾತ್ಮಕ ಚಟುವಟಿಕೆಗಳು ನೆರವೇರಲಿವೆ.
ಕರ್ನಾಟಕ ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಪ್ರಗತಿಪರ ಕೃಷಿಕರಾದ ಶ್ರೀ ಯಶವಂತ ಕುಡೆಕಲ್ಲು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೇಸಿಐ ಭಾರತ ವಲಯ 15ರ ರಕ್ತದಾನ ವಿಭಾಗದ ವಲಯ ಸಂಯೋಜಕರಾದ JC ಪ್ರದೀಪ್ ಕುಮಾರ್ ರೈ ಹಾಗೂ B2B ವಿಭಾಗದ ವಲಯ ಸಂಯೋಜಕರಾದ HGF ವಿಷ್ಣುಪ್ರಕಾಶ್ ನಾರ್ಕೋಡು ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ತುಳುನಾಡಿನ ಆಟಿ ತಿಂಗಳ ವೈಶಿಷ್ಟ್ಯ ಹಾಗೂ ವಿಶಿಷ್ಟ ತಿನಿಸುಗಳನ್ನು ಬಿಂಬಿಸುವ ಸಾಂಪ್ರದಾಯಿಕ ‘ಆಟಿ ಗಮ್ಮತ್’ ಆಹಾರ ವೈವಿಧ್ಯದ ಸವಿಯು ಭಾಗವಹಿಸುವ ಪ್ರತಿಯೊಬ್ಬರಿಗೂ ದೊರೆಯಲಿದೆ. ಪ್ರಕೃತಿದತ್ತ ಆರೋಗ್ಯಕರ ಆಹಾರ ಪದ್ಧತಿಯ ಮಹತ್ವವನ್ನು ಸಾರುವ ಖಾದ್ಯಗಳು ಹಾಗೂ ಆಟಿ ಕೂಟದ ಸಂಭ್ರಮವು ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿರಲಿದೆ.
ಕಾರ್ಯಕ್ರಮಕ್ಕೆ ಜೇಸಿಐ ಸುಳ್ಯ ಸಿಟಿಯ ಕಾರ್ಯದರ್ಶಿ JC ತೇಜಸ್ವಿ ಪ್ರಕಾಶ್ ನಾರ್ಕೋಡು, ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸಿಟ್ಯೂಟ್ನ ವ್ಯವಸ್ಥಾಪಕರಾದ JC ವಿನಮ್ರಾಜ್ ಮಡ್ತಿಲ, ಗ್ಲೋಬಲ್ ಕಂಪ್ಯೂಟರ್ & ಟೈಪ್ರೈಟಿಂಗ್ ಸಂಸ್ಥೆಯ ವ್ಯವಸ್ಥಾಪಕರಾದ JC ತೇಜಾಕ್ಷಿ ನಂದಕುಮಾರ್ ಮತ್ತು ಕಲರ್ ಗಾರ್ಮೆಂಟ್ಸ್ ಕೇಂದ್ರದ ವ್ಯವಸ್ಥಾಪಕರಾದ ಶ್ರೀಮತಿ ರಜನಿ ಶುಭಕರ ಅವರು ಎಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.

