ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಭಯೋತ್ಪಾದಕ ಶಬ್ಬೀರ್ ಲೋನ್ ಮತ್ತು ಆತನ ತಂಡದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಭಯೋತ್ಪಾದಕ ಮಾಡ್ಯೂಲ್ ದೆಹಲಿಯ ಪ್ರಸಿದ್ಧ ದೇವಾಲಯಗಳು ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳ ಮೇಲೆ ನಿರಂತರವಾಗಿ ಕಣ್ಣಿಟ್ಟು, ಪರಿಶೀಲನೆ ನಡೆಸಿತ್ತು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.

ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ
ಬಂಧಿತ ಉಗ್ರ ಶಬ್ಬೀರ್ ಲೋನ್ ಪಾಕಿಸ್ತಾನ ಮೂಲದ ಉಗ್ರಗಾಮಿ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಗಡಿ ಆಚೆಯಿಂದ ಬರುವ ಸೂಚನೆಗಳ ಮೇರೆಗೆ ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟ ಅಥವಾ ದಾಳಿ ನಡೆಸಲು ಈ ತಂಡ ಸಿದ್ಧತೆ ನಡೆಸುತ್ತಿತ್ತು. ಇನ್ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಪಾಕ್ ಹ್ಯಾಂಡ್ಲರ್‌ಗಳು ಈತನಿಗೆ ನಿರ್ದೇಶನ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ದೇವಸ್ಥಾನಗಳೇ ಟಾರ್ಗೆಟ್!
ತನಿಖಾ ಸಂಸ್ಥೆಗಳ ಪ್ರಕಾರ, ಈ ಉಗ್ರಗಾಮಿ ಜಾಲವು ದೆಹಲಿಯ ಕೆಲವು ಐತಿಹಾಸಿಕ ದೇವಾಲಯಗಳು ಮತ್ತು ದೊಡ್ಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡಿತ್ತು. ಈಗಾಗಲೇ ಈ ಪ್ರದೇಶಗಳಿಗೆ ಭೇಟಿ ನೀಡಿರುವ ಶಬ್ಬೀರ್ ಲೋನ್, ಅಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಜನದಟ್ಟಣೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನಕ್ಕೆ ರವಾನಿಸಿದ್ದ ಎನ್ನಲಾಗಿದೆ.
ಭದ್ರತಾ ಏಜೆನ್ಸಿಗಳ ಕಾರ್ಯಚರಣೆ
ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ಗುಪ್ತಚರ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಜಾಲವನ್ನು ಭೇದಿಸಲಾಗಿದೆ. ಶಬ್ಬೀರ್ ಲೋನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈತನ ಹಿಂದೆ ಇರುವ ಇತರ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹಬ್ಬಗಳ ಸೀಸನ್ ಹತ್ತಿರವಿರುವ ಕಾರಣ ದೆಹಲಿಯಾದ್ಯಂತ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

