ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಭಾರತೀಯ ನಾಗರಿಕ ಬಲಿ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಭಾರತೀಯ ನಾಗರಿಕ ಬಲಿ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ, ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ ಎಂಬ ವರದಿಗಳು ಹರಿದಾಡುತ್ತಿವೆ. ದಾಳಿಯಿಂದ ವಿಮಾನ ನಿಲ್ದಾಣದ ನಾಗರಿಕ ಟರ್ಮಿನಲ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದಾಳಿಯಲ್ಲಿ ಭಾರತೀಯ ಮೂಲದ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ತುರ್ತು ಸೇವೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ.ಕುವೈತ್ ವಾಯು ರಕ್ಷಣಾ ಪಡೆಗಳು ಹಲವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ತಡೆದಿರುವುದಾಗಿ ವರದಿಗಳು ತಿಳಿಸಿವೆ.

ಆದಾಗ್ಯೂ, ಕೆಲವು ಡ್ರೋನ್‌ಗಳು ವಿಮಾನ ನಿಲ್ದಾಣದ ಆವರಣ ತಲುಪಿದ ಪರಿಣಾಮ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯ ಬಳಿಕ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವಾರು ಅಂತರರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ.ಇರಾನ್, ಅಮೆರಿಕದ ಸೈನಿಕ ಕ್ರಮಗಳಿಗೆ ಕುವೈತ್ ಮತ್ತು ಬಹ್ರೇನ್ ಸಹಕಾರ ನೀಡಿವೆ ಎಂದು ಆರೋಪಿಸುತ್ತಿದ್ದು, ಇದೇ ಹಿನ್ನೆಲೆ ದಾಳಿಗೆ ಕಾರಣ ಎಂದು ಹೇಳಲಾಗಿದೆ.

ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದ್ದು, ಜಾಗತಿಕ ಸಮುದಾಯ ಪರಿಸ್ಥಿತಿಯನ್ನು ಕಣ್ಣಿಟ್ಟಿದೆ.ಭಾರತ ಸರ್ಕಾರ ಈ ರೀತಿಯ ನಾಗರಿಕ ಪ್ರದೇಶಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಕುವೈತ್‌ನಲ್ಲಿರುವ ಭಾರತೀಯರ ಸುರಕ್ಷತೆಯ ಕುರಿತು ನಿರಂತರ ನಿಗಾ ವಹಿಸಲಾಗಿದೆ ಎಂದು ತಿಳಿಸಿದೆ. ಇದೇ ವೇಳೆ, ಕುವೈತ್ ಸರ್ಕಾರವೂ ಘಟನೆಯ ಕುರಿತು ತನಿಖೆ ಆರಂಭಿಸಿ, ರಾಜತಾಂತ್ರಿಕ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಅಂತರಾಷ್ಟ್ರೀಯ ಅಪರಾಧ