
ದೆಹಲಿ, ಏಪ್ರಿಲ್ 22, 2025 — ಹೋಲಿ ಸೀಯ್ ನ ಶ್ರೇಷ್ಠ ಧರ್ಮಗುರು, ಪೋಪ್ ಫ್ರಾನ್ಸಿಸ್ ಏಪ್ರಿಲ್ 21 ರಂದು ನಿಧನರಾದ ಹಿನ್ನೆಲೆ, ಭಾರತ ಸರ್ಕಾರವು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.


ಈ ಶೋಕಾಚರಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ) ರಂದು ಎರಡು ದಿನಗಳ ಶೋಕಾಚರಣೆ ಹಾಗೂ ಪೋಪ್ ಅವರ ಅಂತಿಮ ಸಂಸ್ಕಾರ ನಡೆಯುವ ದಿನದಂದು ಒಂದು ದಿನದ ಶೋಕಾಚರಣೆ ನಡೆಯಲಿದೆ. ಅವರ ಅಂತ್ಯ ಸಂಸ್ಕಾರ ಯಾವಾಗ ನಡೆಯುವುದೆಂದು ವೆಟಿಕನ್ ಘೋಷಿಸಲಿದೆ.
ಈ ದಿನಗಳಲ್ಲಿ, ಎಲ್ಲಾ ಸರಕಾರಿ ಕಚೇರಿಗಳು ಹಾಗೂ ಧ್ವಜಾರೋಹಣ ನಡೆಯುವ ಸ್ಥಳಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಅರ್ಧವರೆಗೆ ಇಳಿಸಲಾಗುವುದು. ಯಾವುದೇ ಪ್ರಕಾರದ ಸರಕಾರಿ ಮನೊರಂಜನಾ ಕಾರ್ಯಕ್ರಮಗಳು ಅಥವಾ ಆಚರಣೆಗಳು ನಡೆಯುವುದಿಲ್ಲ.
ಪೋಪ್ ಫ್ರಾನ್ಸಿಸ್ ಅವರು 2013 ರಿಂದ ಕ್ಯಾಥೋಲಿಕ್ ಚರ್ಚ್ ನ ನೇತೃತ್ವ ವಹಿಸಿದ್ದರು. ಅವರ ಸರಳತೆ, ಕರುಣೆ ಹಾಗೂ ಶಾಂತಿ, ಸಾಮಾಜಿಕ ನ್ಯಾಯ ಮತ್ತು ಧರ್ಮಾಂತರ ಸಂವಾದದ ಪೋಷಕರಾಗಿ ಅವರನ್ನು ಇಡೀ ಜಗತ್ತೇ ಗೌರವಿಸುತ್ತಿತ್ತು. ಅವರ ಅಗಲಿಕೆ ಅಂತಾರಾಷ್ಟ್ರೀಯ ಧಾರ್ಮಿಕ ಇತಿಹಾಸದಲ್ಲಿ ದೊಡ್ಡ ನಷ್ಟವಾಗಿದೆ.
ಪೋಪ್ ಫ್ರಾನ್ಸಿಸ್ ಅವರ ಮರಣದ ಸುದ್ದಿ ತಿಳಿದು ಭಾರತ ಸರ್ಕಾರ ಹಾಗೂ ವಿವಿಧ ರಾಜಕೀಯ ಹಾಗೂ ಧಾರ್ಮಿಕ ನಾಯಕರು ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಜಗತ್ತಿಗೆ ಕೊಟ್ಟ ಶಾಂತಿ ಸಂದೇಶ ಹಾಗೂ ಮಾನವೀಯ ಸೇವೆಯನ್ನು ಭಾರತ ಗೌರವಿಸುತ್ತದೆ.
ಪೋಪ್ ಫ್ರಾನ್ಸಿಸ್ ಅವರ ಅಂತ್ಯ ಸಂಸ್ಕಾರದ ದಿನ ಹಾಗೂ ಆ ದಿನದ ಶೋಕಾಚರಣೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವೆಟಿಕನ್ ಶೀಘ್ರದಲ್ಲೇ ಪ್ರಕಟಿಸಲಿದೆ.