
ಭುವನೇಶ್ವರ: ಬಲಸೋರ್ ತ್ರಿವಳಿ ರೈಲು ದುರಂತದಲ್ಲಿ
ಮೃತಪಟ್ಟವರ ಸಂಖ್ಯೆ 233ಕ್ಕೇರಿದೆ. ಈ ಭಯಾನಕ
ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿ
ಗಾಯಗೊಂಡಿದ್ದಾರೆ. ಶಾಲಿಮರ್-ಚೆನ್ನೈ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ 10 ರಿಂದ 12 ಬೋಗಗಳು ಹಳಿತಪ್ಪಿ, ಎದುರಿನ ಹಳಿಗೆ ಬಿದ್ದು ದುರಂತ ಸಂಭವಿಸಿದೆ. ಇದೇ ವೇಳೆ ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಈ ರೈಲಿನ ಮೂರು- ನಾಲ್ಕು ಬೋಗಿಗಳೂ ಹಳಿ ತಪ್ಪಿದವು. ಗೂಡ್ಸ್ ರೈಲು ಕೂಡಾ ಈ ದುರಂತದಲ್ಲಿ ಅಪಘಾತಕ್ಕೀಡಾಗಿದೆ .
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವುದಾಗಿ ಶನಿವಾರ ಘೋಷಿಸಿದ್ದಾರೆ. ”ಈ ದುರಂತ ದುರದೃಷ್ಟಕ ಹಾಗೂ ತಕ್ಷಣವೇ ಪರಿಹಾರ ಕಾರ್ಯ ಆರಂಭವಾಗಿದೆ.
ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ಗಂಭೀರವಾಗಿ
ಗಾಯಗೊಂಡವರಿಗೆ 2 ಲಕ್ಷ ಮತ್ತು ಸಣ್ಣ ಪುಟ್ಟ
ಗಾಯಗಳಾದವರಿಗೆ 50 ಸಾವಿರ ರೂಪಾಯಿ
ಪರಿಹಾರವನ್ನು ಇಲಾಖೆ ಈಗಾಗಲೇ ಘೋಷಿಸಿದೆ’ ಎಂದು ಅವರು ವಿವರಿಸಿದ್ದಾರೆ.
ದುರಂತದಲ್ಲಿ 233 ಮಂದಿ ಜೀವ ಕಳೆದುಕೊಂಡಿದ್ದಾರೆ
ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ
ದೃಢಪಡಿಸಿದ್ದಾರೆ. ಶುಕ್ರವಾರ ಮುಸ್ಸಂಜೆ ವೇಳೆಗೆ ನಡೆದ
ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿ
ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಈ ಭಯಾನಕ ಘಟನೆ ಹಿನ್ನೆಲೆಯಲ್ಲಿ ಶನಿವಾರ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಯನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.

