
ಬೆಂಗಳೂರು: ಅರೆಕಾಲಿಕ ಕೆಲಸ ಕೊಡುವ ಆಮಿಷವೊಡ್ಡಿ ತಮ್ಮ ಆ್ಯಪ್ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೇ ವಂಚಿಸಿರುವ ಆರೋಪದಡಿ ಇಂಡಿಯನ್ ಮನಿ ಫ್ರೀಡಂ ಕಂಪೆನಿ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್.ಸುಧೀರ್ ಅವರನ್ನು ಬನಶಂಕರಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಸುಧೀರ್ ಮತ್ತವರ ತಂಡದ ವಿರುದ್ಧ ವಂಚನೆಗೀಡಾಗಿರುವ 21 ಮಂದಿ ದೂರು ನೀಡಿದ್ದರು. ಅದರ ಅನ್ವಯ ಬನಶಂಕರಿ ಠಾಣೆಯಲ್ಲಿ ಸುಧೀರ್ ಸೇರಿ 23 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ನ್ಯಾಯಾಲಯದಿಂದ
ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಆರೋಪಿಗಳಿಗೆ ವಿಚಾರಣೆಗಾಗಿ ತನಿಖಾಧಿಕಾರಿ ಎದುರು ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ. ಈ ಹಿನ್ನೆಲೆಯಲ್ಲಿ 3 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು.

