ಡೆಲ್ಲಿ ಕ್ಯಾಪಿಟಲ್ಸ್ ಧೂಳೀಪಟ: ಆರ್ಸಿಬಿಗೆ 9 ವಿಕೆಟ್ಗಳ ಭರ್ಜರಿ ಜಯ!

ಡೆಲ್ಲಿ ಕ್ಯಾಪಿಟಲ್ಸ್ ಧೂಳೀಪಟ: ಆರ್ಸಿಬಿಗೆ 9 ವಿಕೆಟ್ಗಳ ಭರ್ಜರಿ ಜಯ!

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ 2026ರ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದೆ.

ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಜೋಶ್ ಹೇಜಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಕೇವಲ 16.3 ಓವರ್‌ಗಳಲ್ಲಿ 75 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.

ಬೆಂಗಳೂರು ಪರ ಅತ್ಯಂತ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಜೋಶ್ ಹೇಜಲ್ವುಡ್ 4 ವಿಕೆಟ್ ಪಡೆದು ಮಿಂಚಿದರೆ, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಕೇವಲ 5 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪವರ್‌ಪ್ಲೇ ಅವಧಿಯಲ್ಲೇ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ ತಂಡವು ಇಡೀ ಪಂದ್ಯದುದ್ದಕ್ಕೂ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಡೆಲ್ಲಿ ಬ್ಯಾಟರ್‌ಗಳು ಆರ್ಸಿಬಿ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ಪೆವಿಲಿಯನ್‌ಗೆ ಪರೇಡ್ ನಡೆಸಿದರು.76 ರನ್‌ಗಳ ಅತ್ಯಲ್ಪ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡವು ಕೇವಲ 6.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿ ವಿಜಯದ ನಗೆ ಬೀರಿದೆ. ಸ್ಫೋಟಕ ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡವು ಇನ್ನೂ 81 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ತನ್ನ ರನ್ ರೇಟ್ ಅನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಈ ಬೃಹತ್ ಗೆಲುವಿನೊಂದಿಗೆ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಭದ್ರವಾದ ಸ್ಥಾನವನ್ನು ಕಂಡುಕೊಂಡಿದೆ.

ಅಂತರಾಷ್ಟ್ರೀಯ ಕ್ರೀಡೆ