ಗಣ್ಯರ ಔತಣಕೂಟದಲ್ಲಿ ಗುಂಡಿನ ಸದ್ದು: ಟ್ರಂಪ್ ಗುರಿಯಾಗಿಸಿ ದಾಳಿ ನಡೆಯಿತೇ? ಹಿಲ್ಟನ್ ಹೋಟೆಲ್‌ನಲ್ಲಿ ಆಗಿದ್ದೇನು?

ಗಣ್ಯರ ಔತಣಕೂಟದಲ್ಲಿ ಗುಂಡಿನ ಸದ್ದು: ಟ್ರಂಪ್ ಗುರಿಯಾಗಿಸಿ ದಾಳಿ ನಡೆಯಿತೇ? ಹಿಲ್ಟನ್ ಹೋಟೆಲ್‌ನಲ್ಲಿ ಆಗಿದ್ದೇನು?

ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನಡೆದ ಹೈಪ್ರೊಫೈಲ್ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್’ ವೇಳೆ ಗುಂಡಿನ ದಾಳಿಯ ಭೀತಿ ಎದುರಾಗಿದೆ. ಹಿಲ್ಟನ್ ಹೋಟೆಲ್‌ನ ಲಾಬಿಯಲ್ಲಿ ಗುಂಡು ಹಾರಿದ ಸದ್ದು ಕೇಳಿಬರುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿದ್ದ ಗಣ್ಯರು ದಿಕ್ಕಾಪಾಲಾಗಿ ಓಡಿದ್ದಾರೆ. ಭದ್ರತಾ ಕಾರಣಗಳಿಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಅವರನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಘಟನೆಯ ವಿವರ:ಶನಿವಾರ ರಾತ್ರಿ ಹೋಟೆಲ್‌ನಲ್ಲಿ ಪತ್ರಕರ್ತರು, ರಾಜಕಾರಣಿಗಳು ಮತ್ತು ಹಾಲಿವುಡ್ ತಾರೆಯರು ಸೇರಿದಂತೆ ನೂರಾರು ಗಣ್ಯರು ನೆರೆದಿದ್ದರು. ಕಾರ್ಯಕ್ರಮ ಅದ್ದೂರಿಯಾಗಿ ಸಾಗುತ್ತಿದ್ದಾಗ ಹೋಟೆಲ್‌ನ ಕೆಳಮಹಡಿಯ ಲಾಬಿಯಿಂದ ಹಠಾತ್ ಗುಂಡಿನ ಸದ್ದು ಕೇಳಿಬಂದಿದೆ. ಇದರಿಂದ ಗಾಬರಿಗೊಂಡ ಜನ ಅಸುಪಾಸಿನ ಟೇಬಲ್‌ಗಳ ಕೆಳಗೆ ಅವಿತು ಕುಳಿತರು. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು ಹೋಟೆಲ್‌ನ ಎಲ್ಲಾ ದ್ವಾರಗಳನ್ನು ಬಂದ್ ಮಾಡಿ ತಪಾಸಣೆ ನಡೆಸಿದರು.

ಗುಂಡಿನ ಸದ್ದು ಕೇಳಿದ ಕೆಲವೇ ಕ್ಷಣಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಸುತ್ತ ಭದ್ರತಾ ಕವಚ ನಿರ್ಮಿಸಿದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು, ಅವರನ್ನು ಹಿಂಬಾಗಿಲಿನ ಮೂಲಕ ಸುರಕ್ಷಿತವಾಗಿ ಹೊರಗೆ ಕರೆತಂದರು. ಸದ್ಯ ಟ್ರಂಪ್ ದಂಪತಿ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ​ ಘಟನೆಯಲ್ಲಿ ಯಾರಿಗಾದರೂ ಗಾಯಗಳಾಗಿದೆಯೇ ಅಥವಾ ದಾಳಿಕೋರ ಯಾರು ಎಂಬ ಬಗ್ಗೆ ವಾಷಿಂಗ್ಟನ್ ಪೊಲೀಸರು ಇನ್ನು ಅಧಿಕೃತ ಮಾಹಿತಿ ನೀಡಿಲ್ಲ. ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಅಂತರಾಷ್ಟ್ರೀಯ