ಮಾಧ್ಯಮಗಳಲ್ಲಿನ ಸಂಭಾವ್ಯ ಸಚಿವರ ಪಟ್ಟಿ ಅಧಿಕೃತವಲ್ಲ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಮಾಧ್ಯಮಗಳಲ್ಲಿನ ಸಂಭಾವ್ಯ ಸಚಿವರ ಪಟ್ಟಿ ಅಧಿಕೃತವಲ್ಲ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ

​ಬೆಂಗಳೂರು: ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೂತನ ಸಚಿವ ಸಂಪುಟದ ಸಂಭಾವ್ಯ ಸಚಿವರ ಪಟ್ಟಿಗಳು ಅಧಿಕೃತವಲ್ಲ ಎಂದು ಕರ್ನಾಟಕದ ನಿಯುಕ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸಚಿವರ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರೊಂದಿಗೆ ಸಚಿವ ಸಂಪುಟ ರಚನೆ ಕುರಿತು ಸುದೀರ್ಘ ಚರ್ಚೆ ನಡೆಸಿದ ಬಳಿಕ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬೆಂಗಳೂರಿಗೆ ಮರಳಿದ ಡಿ.ಕೆ. ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

​”ಮಾಧ್ಯಮಗಳಲ್ಲಿ ಇಂದು ಪ್ರಕಟವಾಗುತ್ತಿರುವ ಯಾವುದೇ ಪಟ್ಟಿಯೂ ಅಧಿಕೃತವಲ್ಲ. ಸಚಿವರ ಆಯ್ಕೆ ಕುರಿತು ಹೈಕಮಾಂಡ್ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಂತಿಮ ನಿರ್ಧಾರವನ್ನು ಪಕ್ಷದ ವರಿಷ್ಠರೇ ಕೈಗೊಳ್ಳಲಿದ್ದಾರೆ ಮತ್ತು ಅವರೇ ಅಧಿಕೃತವಾಗಿ ಹೆಸರುಗಳನ್ನು ಪ್ರಕಟಿಸಲಿದ್ದಾರೆ. ಅಲ್ಲಿಯವರೆಗೆ ಯಾವುದೇ ವದಂತಿಗಳನ್ನು ನಂಬಬೇಡಿ,” ಎಂದು ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇಂದು ಲೋಕ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ​ಜೂನ್ 3 ರಂದು (ಇಂದು) ಇಲ್ಲಿನ ಲೋಕ ಭವನದಲ್ಲಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು ಎಂಬ ದೊಡ್ಡ ಮಟ್ಟದ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ನಿಯುಕ್ತ ಸಿಎಂ, ಹೈಕಮಾಂಡ್ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಸ್ಪಷ್ಟಪಡಿಸುವ ಮೂಲಕ ಕುತೂಹಲವನ್ನು ಕಾಯ್ದುಕೊಂಡಿದ್ದಾರೆ.

ರಾಜಕೀಯ ರಾಜ್ಯ