ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ – ರಾಘವೇಶ್ವರ ಶ್ರೀ

ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ – ರಾಘವೇಶ್ವರ ಶ್ರೀ

  • ನೀರು ಕೇವಲ ದಾಹ ತಣಿಸುವ ದ್ರವವಲ್ಲ
  • ಸ್ವಾತಿ ನಕ್ಷತ್ರದ ಮಳೆ ನೀರು ದಿವ್ಯೌಷಧ
  • ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ

ಗೋಕರ್ಣ: ಮಾನವನ ದೈನಂದಿನ ಜೀವನದಲ್ಲಿ ನೀರು ಕೇವಲ ದಾಹ ತಣಿಸುವ ದ್ರವವಲ್ಲ. ಅದು ಶರೀರದ ಆರೋಗ್ಯವನ್ನು ಕಾಯ್ದುಕೊಳ್ಳುವ ದಿವ್ಯ ಔಷಧ ಹಾಗೂ ಪರಮ ಧರ್ಮ ಸಾಧನ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 18.09.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಯಜ್ಞ – ತಪಸ್ಸು – ವ್ರತಗಳನ್ನು ಮಾಡದೇ ಇದ್ದರೂ ಬಾಯಾರಿದವರಿಗೆ ನೀರನ್ನು ದಾನ ಮಾಡಿದವನು ಸ್ವರ್ಗವನ್ನು ಪಡೆಯುತ್ತಾನೆ. ಬಾಯಾರಿದವರಿಗೆ ನೀರು ನೀಡುವುದು ಮತ್ತೊಬ್ಬರ ಜಠರಾಗ್ನಿಗೆ ಜಲವನ್ನು ಆಹುತಿಯಾಗಿ ನೀಡುವ ಯಜ್ಞದಂತೆ. ಬೇಸಿಗೆಯಲ್ಲಿ ದಾರಿಹೋಕರಿಗೆ ನೀರನ್ನು ಒದಗಿಸುವುದು, ಬಾವಿ ಹಾಗೂ ಕೆರೆಗಳನ್ನು ನಿರ್ಮಿಸುವುದು ಶ್ರೇಷ್ಠ ಕಾರ್ಯ ಎಂದು ಧರ್ಮ ಶಾಸ್ತ್ರವನ್ನು ಆಧರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜೀವನದಲ್ಲಿ ದೊರೆಯುವ ಅಪರೂಪದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಶ್ರೀಗಳು, ಸ್ವಾತಿ ನಕ್ಷತ್ರದ ಮಳೆಯ ನೀರಿನ ಕುರಿತಾಗಿ ವಿವರಿಸುತ್ತಾ, ಇದು ಜೀರ್ಣಕ್ಕೆ ಲಘು, ದೇಹಕ್ಕೆ ಪಥ್ಯಕರ ಹಾಗೂ ದೀರ್ಘಕಾಲದವರೆಗೆ ಕೆಡದಂತೆ ಉಳಿಯುವ ದಿವ್ಯಗುಣವನ್ನು ಸ್ವಾತಿ ಮಳೆ ನೀರು ಹೊಂದಿರುತ್ತದೆ. ವರ್ಷಗಳ ಕಾಲ ಇದನ್ನು ಸಂಗ್ರಹಿಸಿದರೂ ಈ ನೀರಿನಲ್ಲಿ ಸೂಕ್ಷಣು ಜೀವಿಗಳು ಉತ್ಪತ್ತಿಯಾಗುವುದಿಲ್ಲ ಎಂದು ಆಧುನಿಕ ವಿಜ್ಞಾನವೂ ಒಪ್ಪಿದೆ ಎಂದರು.

ಗಂಗಾ ನದಿಯ ನೀರಿನ ಸಂಸರ್ಗದಿಂದ ಪಾಪ ಪರಿಹಾರದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು,ಪಶ್ಚಾತ್ತಾಪ ಇರುವವನಿಗೆ ಮಾತ್ರ ಪ್ರಾಯಶ್ಚಿತ್ತ ಮಾಡುವ ಅಧಿಕಾರ ಇರುವುದಾಗಿದೆ. ಮಾಡಿದ ತಪ್ಪನ್ನು ಅರಿತು ಪುನಃ ತಪ್ಪನ್ನು ಮಾಡದಿರುವ ದೃಢಸಂಕಲ್ಪವೇ ಪ್ರಾಯಶ್ಚಿತ್ತವಾಗಿದ್ದು, ಆ ಮನಸ್ಸಿನಿಂದ ಮಾಡಿದ ಗಂಗಾ ಸ್ನಾನದಿಂದ ಮಾತ್ರ ಪಾಪ ಪರಿಹಾರವಾಗುತ್ತದೆ ಎಂದು ಉತ್ತರಿಸಿದರು.

ಆನಂದ ಭಟ್ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಚಂದ್ರರಾವ್ ಗಾಂಜಾಳ ದಂಪತಿಗಳು ಉಪಸ್ಥಿತರಿದ್ದರು.

ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀರಾಮಚಂದ್ರಾಪುರ ಮಠಕ್ಕೆ ತಲೆತಲಾಂತರದಿಂದ ನಡೆದುಕೊಳ್ಳುವ ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪಾದುಕಾ ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಮಡಿವಾಳ ಸಮಾಜವು ಸಂಘಟಿತವಾಗುವ ಮೂಲಕ ಹೆಚ್ಚಿನ ಒಳಿತನ್ನು ಪಡೆಯುವಂತಾಗಲಿ. ಸಮಾಜದ ಜೊತೆಗೆ ಗುರುಪೀಠ ಸದಾ ಇರಲಿದ್ದು, ಸಮಾಜದ ಕಷ್ಟ – ನಷ್ಟಗಳು ದೂರವಾಗಲಿ ಎಂದು ಆಶೀರ್ವದಿಸಿದರು. ಮಂಜುನಾಥ ಮಡಿವಾಳ, ಸದಾನಂದ ಮಡಿವಾಳ, ಮಂಜುನಾಥ ಬಿಳಗಿ, ರಮಾನಂದ ಮಡಿವಾಳ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ರಾಜ್ಯ