ಮಂಗಳೂರು / ಬೆಂಗಳೂರು:ಕರಾವಳಿ ಜನರ ದಶಕಗಳ ಸುದೀರ್ಘ ಕನಸು ಹಾಗೂ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರಾಜ್ಯದಲ್ಲಿ ತುಳು ಭಾಷೆಗೆ ‘ಎರಡನೇ ಆಡಳಿತ ಭಾಷೆ’ (Second Additional Administrative Language) ಮಾನ್ಯತೆ ನೀಡಲು ಕರ್ನಾಟಕ ಸಚಿವ ಸಂಪುಟ ಶುಕ್ರವಾರ ನಡೆಯಿತು ಸಭೆಯಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ಈ ಮಹತ್ವದ ನಿರ್ಧಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳು ಭಾಷೆಯು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕವಾಗಿ ಬೆಳೆಯಲು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಕರಾವಳಿ ಭಾಗದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ” ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಕಚೇರಿ (CMO) ಬಿಡುಗಡೆ ಮಾಡಿರುವ ಸಂಪುಟದ ಟಿಪ್ಪಣಿಯ ಪ್ರಕಾರ, ರಾಜ್ಯದಲ್ಲಿ ಕನ್ನಡವು ಮೊದಲ ಅಧಿಕೃತ ಆಡಳಿತ ಭಾಷೆಯಾಗಿ ಮುಂದುವರಿಯಲಿದ್ದು, ಕರಾವಳಿ ಪ್ರದೇಶಗಳ ಆಡಳಿತ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ತುಳುವನ್ನು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಸಮ್ಮತಿಸಲಾಗಿದೆ.
ಈ ನಿರ್ಧಾರದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳು ಭಾಷೆಯ ಬಳಕೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಸರ್ಕಾರದ ಈ ಐತಿಹಾಸಿಕ ತೀರ್ಮಾನಕ್ಕೆ ಕರಾವಳಿಯ ಜನತೆ, ತುಳು ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಸಂಘ-ಸಂಸ್ಥೆಗಳು ತೀವ್ರ ಸಂತಸ ವ್ಯಕ್ತಪಡಿಸಿವೆ.

