ಇರಾನ್ ಪ್ರತಿಕಾರ: ಬಹ್ರೇನ್, ಜೋರ್ಡಾನ್ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ತೀವ್ರ

ಇರಾನ್ ಪ್ರತಿಕಾರ: ಬಹ್ರೇನ್, ಜೋರ್ಡಾನ್ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ತೀವ್ರ

ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಪ್ರಾಂತ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ನ ದಕ್ಷಿಣ ಭಾಗಗಳ ಮೇಲೆ ನಡೆಸಿದ ವಾಯುದಾಳಿಗಳಿಗೆ ಪ್ರತಿಯಾಗಿ ಇರಾನ್ ಭೀಕರ ಪ್ರತಿಕಾರ ತೀರಿಸಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಅತ್ಯಂತ ಪ್ರಮುಖ ‘5ನೇ ಫ್ಲೀಟ್’ (Fifth Fleet) ಪ್ರಧಾನ ಕಚೇರಿ ಹಾಗೂ ಜೋರ್ಡಾನ್ ಮತ್ತು ಕುವೈತ್‌ನಲ್ಲಿರುವ ಯುಎಸ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್‌ಗಳ ಸುರಿಮಳೆಗೈದಿದೆ.

ಈ ದಿಢೀರ್ ದಾಳಿಯಿಂದಾಗಿ ಇಡೀ ಗಲ್ಫ್ ಪ್ರಾಂತ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ.ಬಹ್ರೇನ್‌ನಲ್ಲಿ ನಡೆದ ದಾಳಿಯಲ್ಲಿ ಅಲ್ಲಿನ ಪ್ರಮುಖ ತೈಲ ಸಂಸ್ಕರಣಾ ಘಟಕವಾದ ‘ಬಾಪ್ಕೋ’ (BAPCO) ತೀವ್ರವಾಗಿ ಹಾನಿಗೊಳಗಾಗಿದ್ದು, ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಅಮೆರಿಕ ಸೇನೆಯ ಕಮಾಂಡ್ ಕಟ್ಟಡವೊಂದು ಭಾಗಶಃ ಧ್ವಂಸಗೊಂಡಿದೆ ಎಂದು ಇರಾನ್ ಮೂಲಗಳು ಪ್ರತಿಪಾದಿಸುತ್ತಿದ್ದರೆ, ಅಮೆರಿಕದ ‘ಪೇಟ್ರಿಯಾಟ್’ (Patriot) ವಾಯು ರಕ್ಷಣಾ ವ್ಯವಸ್ಥೆಗಳು ತಕ್ಷಣವೇ ಸಕ್ರಿಯಗೊಂಡು ಹಲವು ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಎಂದು ಯುಎಸ್ ಪ್ರಕಟಿಸಿದೆ.

ಸದ್ಯಕ್ಕೆ ಗಲ್ಫ್ ರಾಷ್ಟ್ರಗಳ ವಾಯುಮಂಡಲವನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ತಲ್ಲಣ ಸೃಷ್ಟಿಯಾಗಿದೆ. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಈ ಉದ್ಧಟತನಕ್ಕೆ ಭೀಕರವಾಗಿ ತಕ್ಕ ಶಾಸ್ತಿ ಮಾಡುವುದಾಗಿ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಅಂತರಾಷ್ಟ್ರೀಯ ಅಪರಾಧ