
ಪುತ್ತೂರು, ಮೇ 04: ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರವಾಗಿ ಪುತ್ತೂರಿನಲ್ಲಿ ಬೃಹತ್ ಮತದಾರ ಜಾಗೃತಿ ಸಭೆ ನಡೆಸುವುದಾಗಿ ವಿಶ್ವ ಹಿಂದೂ ಪರಿಷತ್,ಭಜರಂಗದಳ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ.
ಮೇ 8 ರಂದು ಸಂಜೆ 5 ಗಂಟೆಗೆ ದರ್ಬೆ ವೃತ್ತದಿಂದ ಮೆರವಣಿಗೆಯ ಮೂಲಕ ತೆರಳಲಿರುವ ಕಾರ್ಯಕರ್ತರು ಬಳಿಕ ಕಿಲ್ಲೆ ಮೈದಾನದಲ್ಲಿ ಜಾಗೃತಿ ಸಭೆ ನಡೆಯಲಿದೆ. ಜಿಲ್ಲೆಯ ಹಿಂದೂ ಮುಖಂಡರು, ಸ್ವಾಮೀಜಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಹಿಂದುತ್ವದ ಶಕ್ತಿ ಕೇಂದ್ರ ಪುತ್ತೂರಿನಲ್ಲಿ ಜಾಗೃತಿ ಸಭೆ ಆಯೋಜನೆ ಮಾಡಿದ್ದು, ಜಿಲ್ಲೆಯ ಮನೆ ಮನೆಯಲ್ಲಿ ಕಾಂಗ್ರೆಸ್ ವಿರುದ್ಧ ಹಿಂದೂ ಸಂಘಟನೆಗಳು ಪೋಸ್ಟರ್ ಅಂಟಿಸಲಿದ್ದಾರೆ. ನನ್ನ ಮನೆ ಹಿಂದೂ ಮನೆ, ಧರ್ಮ ರಕ್ಷಿಸುವ ಭಜರಂಗದಳವನ್ನು ನಿಷೇಧಿಸಲು ಹೊರಟ ಕಾಂಗ್ರೇಸ್ ಗೆ ಮತ ಕೇಳಲು ಪ್ರವೇಶವಿಲ್ಲ ಎನ್ನುವ ಪೋಸ್ಟರ್ ಅಂಟಿಸಲಿದ್ದಾರೆ ಎಂದು ಶರಣ್ ಪಂಪ್ವೆಲ್ ಹೇಳಿದ್ದಾರೆ.