
ಪುತ್ತೂರು:ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಾಗೂ ಬ್ಲಾಕ್ ಕಿಸಾನ್ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ರಾಜ್ಯ ಗೃಹ ಸಚಿವರು ಅಡಿಕೆ ಬೆಳೆಗಾರರ ಕುರಿತು ವಿರೋಧಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನಾ ಸಭೆ ಸೋಮವಾರ ಅಮರ್ ಜವಾನ್ ಸ್ಮಾರಕದ ಬಳಿಕ ನಡೆಯಿತು.



ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಅಡಿಕೆಯ ಕುರಿತು ಗೃಹ ಸಚಿವರು ಅಡಿಕೆಗೆ ಭವಿಷ್ಯವಿಲ್ಲ ಎಂದು ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲರ ಭವಿಷ್ಯಕ್ಕೂ ಮಾರಕವಾಗಿದೆ. ಪ್ರಸ್ತುತ ಅಡಿಕೆಗೆ ಬಂದಿರುವ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿಲ್ಲ. ಈ ಖಂಡನೀಯ ಹೇಳಿಕೆ ಕುರಿತು ಕಾಂಗ್ರೆಸ್ ಗ್ರಾಮ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಿದೆ. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಪರ ಸರಕಾರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ ಮಾತನಾಡಿ, ದೇಶದ ಪ್ರಗತಿಯಲ್ಲಿ ಕೃಷಿಕರ ಪಾತ್ರ ಮಹತ್ತರವಾದದ್ದು. ಹೀಗಿದ್ದರೂ ಅಡಿಕೆ ಕುರಿತು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ರೈತರನ್ನು ತುಳಿಯುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ. ಇನ್ನೊಂದೆಡೆ ಆಮದು ನೀತಿಯಿಂದಾಗಿ ಅಡಕೆ ದರ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಆಮದು ನಿಲ್ಲಿಯ ಪ್ರಯತ್ನವನ್ನು ಸರಕಾರ ಮಾಡಲಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ಮಾತನಾಡಿ, ಆಡಳಿತದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಎಲ್ಲಾ ಅಡಿಕೆ ರೈತರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಭವಿಷ್ಯವಿಲ್ಲದಂತೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ ಅವರು, ಕೃಷಿಕರಿಗೆ ಭೂಮಿ ಒಡೆತನ ನೀಡಿದ್ದು ಕಾಂಗ್ರೆಸ್, ಉಚಿತ ವಿದ್ಯುತ್ ನೀಡಿದ್ದು ಕಾಂಗ್ರೆಸ್. ಇದರಿಂದ ಬಿಜೆಪಿ ರೈತರು ಇಂದು ಬದುಕುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ, ಜಿಲ್ಲಾ ವಕ್ತಾರ ಮುರಳೀಧರ ರೈ ಮಠಂತಬೆಟ್ಟು,ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ರಾಜಾರಾಮ ಕೆ.ಬಿ., ಮುಖಂಡರಾದ ಧನಂಜಯ ಅಡ್ಪಂಗಾಯ, ಅಮಲ ರಾಮಚಂದ್ರ, ಪ್ರಸಾದ್ ಕೌಶಲ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಎ.ಕೆ.ಜಯರಾಮ ರೈ, ಕೃಷ್ಣಪ್ರಸಾದ್ ಆಳ್ವ, ರಿಯಾಝ್, ಪ್ರವೀಣ್‍ಚಂದ್ರ ಆಳ್ವ, ವಿಜಯ ಕುಮಾರ್ ಸೊರಕೆ, ಸಾಹಿರಾ ಜುಬೇರ್, ಭರತ್ ಮುಂಡೋಡಿ, ಅಭಿಷೇಕ್, ಜೋಕಿಂ ಡಿ”ಸೋಜಾ, ಮೌರಿಸ್ ಮಸ್ಕರೇನಸ್, ಶರೂನ್ ಸಿಕ್ವೇರಾ ಮತ್ತಿತರರು ಪಾಲ್ಗೊಂಡಿದ್ದರು.